ಬಿಜೆಪಿ ಶಾಸಕ‌ ಮಾಡಾಳ್ ಬಂಧನಕ್ಕೆ ಕೆ ಆರ್ ಎಸ್ ಪಕ್ಷ ಆಗ್ರಹ

ದಾವಣಗೆರೆ: ಲೋಕಾಯುಕ್ತ ಬಲೆಗೆ ಬಿದ್ದ ಪ್ರಶಾಂತ್ ಮಾಡಾಳ್ ಪ್ರಕರಣದಲ್ಲಿ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಇನ್ನೆರಡು ದಿನಗಳಲ್ಲಿ  ಬಂಧಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹೇಳಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾನೂನು ಘಟಕದ ಜಿಲ್ಲಾಧ್ಯಕ್ಷ ಬಿ. ಸೋಮಶೇಖರ್ ಅವರು, ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಮಗ ಪ್ರಶಾಂತ್ ಮಾಡಾಳ್ ಕೆ.ಎಸ್. ಡಿ. ಎಲ್. ನ ಟೆಂಡರ್ ನೀಡಲು ಕೋಟ್ಯಂತರ ರೂಪಾಯಿ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ.‌ ಅಧಿಕಾರ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ಮಾಡಿ ಜನದ್ರೋಹಿ , ದೇಶದ್ರೋಹ ಕೆಲಸ‌ ಮಾಡಿದ್ದು, ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಗುತ್ತಿಗೆದಾರರಿಂದ 1.20 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು ,ಅದರಲ್ಲಿ 81 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡು ಮೊದಲನೆ ಕಂತಾಗಿ 40 ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಖಾಸಗಿ ಕಚೇರಿಯಲ್ಲಿ 2.2 ಕೋಟಿ ಹಣ ಪತ್ತೆಯಾಗಿದ್ದು ಮತ್ತು ಮನೆಯಲ್ಲೂ ಶೋಧ ನಡೆಸಿದಾಗ ಅಲ್ಲಿಯೂ ಸಹ 4 ಕೋಟಿ 30 ಲಕ್ಷ ರೂಪಾಯಿಮತ್ತು ಚಿನ್ನಾಭರಣದ ಪತ್ತೆಯಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೈತಿಕ ಹೊಸ ಹೊತ್ತು ರಾಜೀನಾಮೆ ನೀಡಬೇಕು. ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳಿದ್ದು ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವುಶೇ.40ರಷ್ಟು ಕಮೀಷನ್ ಪಡೆಯುತ್ತಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪ ಮಾಡಿತ್ತು. ಈಗ ಶಾಸಕರ ಪುತ್ರನ ಬಳಿ ಕೋಟ್ಯಂತರ ಹಣ ಪತ್ತೆಯಾಗಿದ್ದು, ಹಗರಣದಲ್ಲಿ ಬಿಜೆಪಿ ಮುಳುಗಿದೆ. ಹಗರಣದ ಜನಸಂಕಲ್ಪ ಮಾಡಲಿ ಎಂದು ಲೇವಡಿ ಮಾಡಿದರು‌.ನೈತಿಕ ಹೊಣೆ ಹೊತ್ತು ಕೂಡಲೇ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜನಸಾಮಾನ್ಯರಿಗೆ ಒಂದು ಕಾನೂನು, ಶಾಸಕರಿಗೊಂದು ಕಾನೂನು ಆಗಿದೆ. ಇನ್ನೆರಡು ದಿನಗಳಲ್ಲಿ ಬಂಧಿಸಬೇಕು. ಇ. ಡಿ. ಗೆ ಈ ಪ್ರಕರಣ ಒಪ್ಪಿಸಬೇಕು ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ. ಮಲ್ಲಪ್ಪ, ವೀರಭದ್ರಪ್ಪ, ಕರಿಬಸಪ್ಪ, ಟಿ. ಅಜ್ಜೇಶ್ ಮತ್ತಿತರರು ಹಾಜರಿದ್ದರು.