ಬಿಜೆಪಿ ಶಾಸಕರು ಸದನಕ್ಕೆ ಗೈರು

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೨- ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಸದನದ ಹೊರಗೆ ಧರಣಿ ನಡೆಸಿರುವ ಬಿಜೆಪಿ ಶಾಸಕರು ಇಂದು ಬೆಳಿಗ್ಗೆ ಸದನಕ್ಕೆ ಗೈರು ಹಾಜರಾದರು.
ಇಂದು ಬೆಳಿಗ್ಗೆಯಿಂದಲೇ ಬಿಜೆಪಿಯ ಎಲ್ಲ ವಿಧಾಸಭೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲರೂ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿ ಅಲ್ಲಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಹಾಗಾಗಿ ಬೆಳಗ್ಗೆ ಸದನದ ಕಲಾಪಗಳಿಗೆ ಹಾಜರಾಗಲಿಲ್ಲ.
ರಾಜ್ಯಪಾಳರಿಗೆ ಮನವಿ ಸಲ್ಲಿಸಿದ ನಂತರ ಬಿಜೆಪಿಯ ಎಲ್ಲ ಸದಸ್ಯರು ಮಧ್ಯಾಹ್ನ ೧೨ರ ನಂತರ ಸದನಕ್ಕೆ ಹಾಜರಾದರು.
ಇಂದು ವಿಧಾನಸಭೆಯಲ್ಲಿ ಕೋರಂ ಗಂಟೆ ಭಾರಿಸಿ ಸದನ ಸಮಾವೇಶಗೊಂಡಾಗ ಪ್ರತಿಪಕ್ಷವಾದ ಬಿಜೆಪಿ ಸದಸ್ಯರುಗಳ ಆಸನಗಳು ಖಾಲಿ ಇದ್ದವು. ಜೆಡಿಎಸ್‌ನ ಕೆಲ ಸದಸ್ಯರು ಹಾಗೂ ಆಡಳಿತ ಪಕ್ಷದ ಸದಸ್ಯರುಗಳಷ್ಟೇ ಸದನದಲ್ಲಿ ಹಾಜರಿದ್ದರು. ಕಾಂಗ್ರೆಸ್‌ನ ಹಲವು ಸದಸ್ಯರುಗಳು ಕಾಂಗ್ರೆಸ್ ನಡೆಸಿರುವ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದ ಆಡಳಿತ ಪಕ್ಷದ ಕಡೆಯೂ ಸಂಪೂರ್ಣ ಹಾಜರಾತಿ ಇರಲಿಲ್ಲ.
ಪ್ರಶ್ನೋತ್ತರ ಕಲಾಪ ಮಧ್ಯಾಹ್ನದ ನಂತರ ನಡೆಯಲಿದ್ದು, ರಾಜ್ಯಪಾಲರ ವಂದನಾ ನಿರ್ಣಯ ಚರ್ಚೆ ಸದನದಲ್ಲಿ ನಡೆದಿದೆ. ಇದಕ್ಕೂ ಮೊದಲು ಸದನ ಆರಂಭವಾಗುತ್ತಿದ್ದಂತೆ ಮೊದಲು ಕೊಬ್ಬರಿ ಖರೀದಿಗೆ ಸಂಬಂಧಿಸಿದಂತೆ ಜವಳಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಉತ್ತರ ನೀಡಿದ್ದರು. ಇದಾದ ನಂತರ ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆ ಕಲಾಪ ನಡೆದಿದೆ.