ಬಿಜೆಪಿ ಶಾಸಕನಿಗೆ ಮಸಿ ಬಳಿದು, ಬಟ್ಟೆ ಹರಿದ ರೈತರು

ಬತಿಂಡಾ,ಮಾ.೨೮- ರೈತರ ಗುಂಪೊಂದು ಬಿಜೆಪಿ ಶಾಸಕನಿಗೆ ಮಸಿ ಬಳಿದು ಎಳೆದಾಡಿ ಬಟ್ಟೆ ಹರಿದು ಹಾಕಿ ಆಕ್ರೋಶ ಹೊರಹಾಕಿರುವ ಘಟನೆ ಪಂಜಾಬ್‌ನ ಬತಿಂಡಾದಲ್ಲಿ ನಡೆದಿದೆ.
ಅಬೋಹರ್ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ನಾರಂಗ್ ಅವರನ್ನು ರೈತರ ಗುಂಪು ಎಳೆದಾಡಿ ಬಟ್ಟೆ ಬಿಚ್ಚಿ ನಡುರಸ್ತೆಯಲ್ಲಿ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಮುಕ್ತ್ ಸರ್ ಜಿಲ್ಲೆಯ ಮಲೌಟ್ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಬಂದ ಬಿಜೆಪಿ ಶಾಸಕನ ಬಟ್ಟೆ ಹರಿದು ಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಿಜೆಪಿ ಶಾಸಕರನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಶ್ವಿನಿ ಶರ್ಮಾ, ಪಂಜಾಬ್‌ನಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಇದಕ್ಕೆ ತಮ್ಮ ಪಕ್ಷದ ಶಾಸಕರ ಮೇಲೆ ರೈತರು ನಡೆಸಿರುವ ಹಲ್ಲೇ ದಬ್ಬಾಳಿಕೆಯ ಕಾರಣ ಎಂದು ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರೈತರು ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿರುವ ಘಟನೆಯ ಹೊಣೆಯನ್ನು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೊರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೃಷಿ ಕಾಯ್ದೆಗಳಿಂದ ವಿರೋಧಿಸಿ ೪ ತಿಂಗಳಿಗೂ ಹೆಚ್ಚು ಸಮಯದಿಂದ ರೈತರು ದೆಹಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಅದನ್ನು ಬಿಜೆಪಿ ಶಾಸಕರು ಮತ್ತು ಸಂಸದರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ನಡೆ ಸರಿಯಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಸಂಘಟನೆ ಆರೋಪಿಸಿದೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಅರುಣ್ ನಾರಂಗ್ ಅವರು ರೈತರು ಯಾವ ಕಾರಣಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆಸಿದರು ಮತ್ತು ಬಟ್ಟೆ ಹರಿದು ಹಾಕಿದರು ಎನ್ನುವುದು ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.