ಬಿಜೆಪಿ ವಿಷಕಾರಿ ಹಾವು: ಉದಯನಿಧಿ

ಚೆನ್ನೈ,ಸೆ.೧೧-ಸನಾತನ ಧರ್ಮವನ್ನು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ದೊಡ್ಡ ಗದ್ದಲ ಎಬ್ಬಿಸಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕಟು ಟೀಕೆ ಮಾಡಿದ್ದಾರೆ. ಬಿಜೆಪಿಯನ್ನು ವಿಷಪೂರಿತ ಹಾವು ಎಂದಿದ್ದಾರೆ. ತಮಿಳುನಾಡಿನ ನೈವೇಲಿಯಲ್ಲಿ ನಡೆದ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ವಿವಾಹ ಸಮಾರಂಭದಲ್ಲಿ ಸ್ಟಾಲಿನ್ ಮಾತನಾಡಿದರು. ಅದೇ ರೀತಿ ಎಐಎಡಿಎಂಕೆ ಪಕ್ಷದ ಮೇಲೆ ಮುಗಿಬಿದ್ದ ಉದಯನಿಧಿ ಇದು ವಿಷಕಾರಿ ಹಾವುಗಳ ಕಸದ ರಾಶಿ ಎಂದು ಹೇಳಿದ್ದಾರೆ.

ಲೋಕಸಭೆ ಸಂಸದ ಹಾಗೂ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ ರಾಜಾ ಅವರು ಪ್ರಧಾನಿ ಮೋದಿಯನ್ನು ಕೆಲವು ದಿನಗಳ ಹಿಂದೆ ಹಾವಿಗೆ ಹೋಲಿಸಿದ್ದರೆ, ಉದಯನಿಧಿ ಅವರು ಇತ್ತೀಚೆಗೆ ಬಿಜೆಪಿಯನ್ನು ಇದೇ ಹೋಲಿಕೆಯೊಂದಿಗೆ ಹೋಲಿಸಿದ್ದಾರೆ. ವಿಷಪೂರಿತ ಹಾವು ನಿಮ್ಮ ಮನೆಗೆ ಬಂದರೆ ಅದನ್ನು ಹೊರಹಾಕಲು ಸಾಕಾಗುವುದಿಲ್ಲ. ಏಕೆಂದರೆ ಅದು ನಿಮ್ಮ ಮನೆಯ ಸಮೀಪವಿರುವ ಕಸದ ರಾಶಿಯಲ್ಲಿ ಅಡಗಿಕೊಂಡಿರಬಹುದು. ಮನೆಯ ಸಮೀಪವಿರುವ ಕಸವನ್ನು ಸ್ವಚ್ಛಗೊಳಿಸದ ಹೊರತು ಹಾವು ನಿಮ್ಮ ಮನೆಗೆ ಬರುತ್ತಲೇ ಇರುತ್ತದೆ ಎಂದಿದ್ದಾರೆ.

ಈಗ ಇದನ್ನು ನಮ್ಮ ರಾಜ್ಯದ ಈಗಿನ ಪರಿಸ್ಥಿತಿಯೊಂದಿಗೆ ತುಲನೆ ಮಾಡಿದರೆ.. ತಮಿಳುನಾಡು ನಮ್ಮ ಮನೆ. ಬಿಜೆಪಿ ಇಲ್ಲಿ ವಿಷಕಾರಿ ಹಾವು. ನಿಮ್ಮ ಮನೆಯ ಸಮೀಪದಲ್ಲಿರುವ ಕಸದ ರಾಶಿ ಎಐಎಡಿಎಂಕೆ. ನೀವು ಕಸ ಗುಡಿಸದೆ ಆ ವಿಷಕಾರಿ ಹಾವನ್ನು ಕಳುಹಿಸಲು ಸಾಧ್ಯವಿಲ್ಲ. ಬಿಜೆಪಿ ತೊಲಗಬೇಕಾದರೆ ಎಐಎಡಿಎಂಕೆಯನ್ನೂ ನಿರ್ನಾಮ ಮಾಡಬೇಕು ಎಂದು ಉದಯನಿಧಿ ಹೇಳಿದ್ದಾರೆ.