ಬಿಜೆಪಿ ವಿರುದ್ಧ ಸಿಎಂ ಗರಂ

ಬೆಂಗಳೂರು,ಜೂ.೬:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಗೆ ಟೀಕೆ ಮಾಡುವ ನೈತಿಕತೆ ಇಲ್ಲ. ಈ ಯೋಜನೆಗಳ ಅನುಷ್ಠಾನವನ್ನು ಅಧಿಕಾರಕ್ಕೆ ಬಂದ ೧೫ ದಿನಗಳಲ್ಲೇ ಮಾಡಿದ್ದೇವೆ. ಆದರೂ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿರುವ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜನವಿರೋಧಿ ಪಕ್ಷ ಅಧಿಕಾರದಲ್ಲಿದ್ದಾಗ ಲೂಟಿ ಹೊಡೆದು, ಲಂಚ ಪಡೆದು ರಾಜ್ಯಕ್ಕೆ ಕೆಟ್ಟ ಹೆಸರು ತಂದರು. ಇವರಿಗೆ ನಮ್ಮ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ ಎಂದರು.ಬಿಜೆಪಿ ೧೦ ಗಂಟೆಯ ವಿದ್ಯುತ್ ನೀಡುವುದಾಗಿ ಹೇಳಿತ್ತು. ಅವರು ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ನಾವು ಅಧಿಕಾರಕ್ಕೆ ಬಂದ ೧೫ ದಿನದಲ್ಲೇ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.ಇಂದಿರಾ ಕ್ಯಾಂಟೀನ್ ಮುಚ್ಚಿದ್ದು ಬಿಜೆಪಿ, ಪಶುಭಾಗ್ಯ, ಶೂ ಭಾಗ್ಯ, ಸೈಕಲ್ ಕೊಡುವುದನ್ನು ನಿಲ್ಲಿಸಿದ್ದು ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದಲ್ಲಿದ್ದಾಗ ಯಾವುದೇ ಭರವಸೆ ಈಡೇರಿಸದ ಬಿಜೆಪಿ, ರಾಜ್ಯಕ್ಕೆ ಕೆಟ್ಟ ಹೆಸರು ತಂದು ಹೋದರು. ಈಗ ನಮಗೇ ಪಾಠ ಹೇಳಿಕೊಡಲು ಬರುತ್ತಾರೆ ಎಂದು ಹರಿಹಾಯ್ದರು.
ಮಡಗಾಸ್ಕ ಗಿಡ ನೆಟ್ಟ ಸಿಎಂ
ದೇವರಾಜ ಅರಸುರವರ ಪುಣ್ಯ ಸ್ಮರಣೆ ಅಂಗವಾಗಿ ಮಡಗಾಸ್ಕ ದೇಶದ ಗಿಡವನ್ನು ಸಿಎಂ ನೆಟ್ಟರು. ಈ ಗಿಡ ಸದಾ ಹಸಿರಾಗಿರುತ್ತದೆ. ಸುಮಾರು ೪೦ ಅಡಿ ಎತ್ತರ ಬೆಳೆಯುತ್ತದೆ. ಅರಸುರವರ ಪುಣ್ಯಸ್ಮರಣೆ ದಿನ ಈ ಗಿಡ ನೆಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.