ಬಿಜೆಪಿ ವಿರುದ್ಧ ಸಲೀಂ ಅಹ್ಮದ್ ವಾಗ್ದಾಳಿ


ಬ್ಯಾಡಗಿ,ಮಾ.15: ರಾಜ್ಯದಲ್ಲಿ 25 ಬಿಜೆಪಿ ಸಂಸದರು, 5 ಜನ ಕೇಂದ್ರ ಸಚಿವರಿದ್ದರೂ ಸಹ ಕಳಸಾಬಂಡೂರಿ ಕಾಮಗಾರಿ ಅರಂಭಿಸಲಿಲ್ಲವೇಕೆ..? ಏನು ಮಾಡುತ್ತಿದ್ದಾರೆ.. ? ಗೋವಾ ಕರ್ನಾಟಕ ಹಾಗೂ ಕೇಂದ್ರದಲ್ಲಿಯೂ ಸೇರಿದಂತೆ ಎಲ್ಲ ಕಡೆಯೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಸಹ ಉತ್ತರ ಕರ್ನಾಟಕ ಮಹತ್ವಾಕಾಂಕ್ಷಿ ಯೋಜನೆ ಅನುಷ್ಟಾನಗೊಳ್ಳಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಲೀಮ್ ಅಹ್ಮದ್ ಆರೋಪಿಸಿದರು.
ಪಟ್ಟಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 25 ಜನ ರೌಡಿ ಶೀಟರ್‍ಗಳನ್ನು ಬಿಡುಗಡೆ ಮಾಡಿದೆ, ನೀವು ಯಾರನ್ನು ಹೆದರಿಸುತ್ತಿದ್ದೀರಿ. ಮುಖ್ಯಮಂತ್ರಿಗಳೇ..? ಇದಕ್ಕೆ ಹೆದರುವ ಪ್ರಶ್ನೆಯಿಲ್ಲ ಇಂತಹ ಸಂದರ್ಭಗಳನ್ನು ಎದುರು ನೋಡಿದ ಪ್ರಧಾನಿಯವರನ್ನು ಏನೆಂದು ಕರೆಯಬೇಕು ಎಂದು ಹರಿ ಹಾಯ್ದರಲ್ಲದೇ, ಬಿಜೆಪಿ ಪಕ್ಷವನ್ನು ಸದೃಡಗೊಳಿಸಿ ಬೆಳೆಸಿದ ಅಡ್ವಾಣಿ, ಉಮಾಭಾರತಿ, ಯಡಿಯೂರಪ್ಪ ಅವರಂತಹ ಧೀಮಂತ ನಾಯಕರನ್ನು ಮನೆಗೆ ಕಳುಹಿಸಿದ್ದೀರಿ.. ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಯಡಿಯೂರಪ್ಪ ಅವರ ಕಣ್ಣೀರಿನ ಕಥೆಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ ಅವರು ಜನಾಶೀರ್ವಾದ ವಿರುದ್ಧದ ಸರ್ಕಾರ ರಚಿಸಿದ್ದು ಲೂಟಿ ಮಾಡೋದಕ್ಕಾ ಎಂದು ಪ್ರಶ್ನಿಸಿದರು.