ಬಿಜೆಪಿ ವಿರುದ್ಧ ವಿಪಕ್ಷ ಒಗ್ಗಟ್ಟು

ನವದೆಹಲಿ,ಏ.೨-ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಂತೆ ಬಿಜೆಪಿ ವಿರುದ್ದ ರಣಕಹಳೆ ಮೊಳಗಿಸಲು ಪ್ರಮುಖ ವಿರೋಧ ಪಕ್ಷಗಳ ನಾಯಕರು ಮುಂದಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ “ಸಾಮಾಜಿಕ ನ್ಯಾಯಕ್ಕಾಗಿ ಅಖಿಲ ಭಾರತ ಒಕ್ಕೂಟ” ರಚನೆ ಮಾಡಿಕೊಂಡಿದ್ದು ವಿರೋಧ ಪಕ್ಷಗಳ ನಾಯಕರ ಎರಡನೇ ಮಹತ್ವದ ಸಭೆ ದೆಹಲಿಯಲ್ಲಿ ನಾಳೆ ನಡೆಯಲಿದೆ.೨೦೨೪ರ ಲೋಕಸಭೆ ಚುನಾವಣೆಯಲ್ಲಿ ಪ್ರತಿ ಪಕ್ಷಗಳಲ್ಲಿ ಒಗ್ಗಟ್ಟು ಕಾಪಾಡಲು ಮತ್ತು ಬಿಜೆಪಿ ವಿರುದ್ದ ಸಂಘಟಿತ ಹೋರಾಟ ಮಾಡುವ ಉದ್ದೇಶ ಇದಾಗಿದೆ. ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ ಮಾಡಿರುವುದು ಸೇರಿದಂತೆ ಬಿಜೆಪಿ ವಿರುದ್ದ ಹೋರಾಡಲು ರೂಪುರೇಷೆ ಸಿದ್ಧಪಡಿಸಲು ನಿರ್ದರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಉನ್ನತ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ನಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜೆಎಂಎಂನಿಂದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಆರ್ ಜೆಡಿಯುನಿಂದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಪ್ರಮಖ ವಿರೋಧ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ.ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಒಗ್ಗೂಡಿಸುವ ಡಿಎಂಕೆ ಪಕ್ಷದ ಎರಡನೇ ಮಹತ್ವದ ಸಭೆ ಇದಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ೭೦ನೇ ಹುಟ್ಟು ಹಬ್ಬದ ನೆಪದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಆರ್ ಜೆಡಿಯ ತೇಜಸ್ವಿ ಯಾದವ್, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ಸೇರಿದಂತೆ ಇನ್ನಿತರೆ ಪ್ರತಿ ಪಕ್ಷಗಳ ನಾಯಕರು ಪಾಲ್ಗೊಳ್ಳುವ ಮೂಲಕ ಬಿಜೆಪಿ ವಿರುದ್ಧ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
ವರ್ಚವಲ್ ನಲ್ಲಿ ಭಾಗಿ:
ದೇಶದಲ್ಲಿ ಬಿಜೆಪಿಯೇತರ ನಾಯಕರು ಒಗ್ಗೂಡಿಸುವ ಸಲುವಾಗಿ ದೆಹಲಿಯಲ್ಲಿ ನಾಳೆ ಕರೆದಿರುವ ಸಾಮಾಜಿಕ ನ್ಯಾಯಕ್ಕಾಗಿ ಅಖಿಲ ಭಾರತ ಒಕ್ಕೂಟದ ಎರಡನೇ ಸಭೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯ ಮೂರು ಮಂದಿ ಆಕಾಂಕ್ಷಿಗಳು ತಮ್ಮ ರಾಜ್ಯಗಳ ಹೊರಗೆ ತಮ್ಮ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಹೈಬ್ರಿಡ್ ಮೋಡ್‌ನಲ್ಲಿ ಸಭೆಯಲ್ಲಿ ಹಾಜರಾಗಲು ನಿರ್ಧರಿಸಿದ್ದು ಸಭೆಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಲು ಯೋಜಿಸಿದ್ದಾರೆ. ಸಭೆಯಲ್ಲಿ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರನ್ನು ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಬಿಆರೆಸ್ ಸಂಸದ ಡಾ.ಕೇಶವ ರಾವ್ ಅವರನ್ನು ಕಳುಹಿಸಲಿದೆ.

ಕುತೂಹಲ ಕೆರಳಿಸಿದ ಸಭೆ
ಬಿಜೆಪಿ ವಿರುದ್ಧ ಪ್ರಬಲವಾದ ಮೈತ್ರಿಕೂಟವನ್ನು ನಿರ್ಮಿಸುವಲ್ಲಿ ಪ್ರಮುಖ ರಾಷ್ಟ್ರೀಯ ಪಾತ್ರವನ್ನು ವಹಿಸುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ನಡೆ ರಾಜಕೀಯ ಕುತೂಹಲ ಕೆರಳಿಸಿದೆ.
ಸಾಮಾಜಿಕ ನ್ಯಾಯಕ್ಕಾಗಿ ಅಖಿಲ ಭಾರತ ಒಕ್ಕೂಟದ ಸಂಚಾಲಕ ಡಿಎಂಕೆ ಸಂಸದ ಪಿ ವಿಲ್ಸನ್ ಇದಕ್ಕೆ ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ. ದೇಶಾದ್ಯಂತ ಸಾಮಾಜಿಕ ನ್ಯಾಯದ ಆಂದೋಲನಕ್ಕೆ ಒತ್ತು ನೀಡುವುದು ಪ್ರತಿಯೊಬ್ಬರಿಗೂ ಎಲ್ಲದರ ದೃಷ್ಟಿ ಸಾಕಾರಗೊಳಿಸುವ ಉದ್ದೇಶ ಹೊಂದಲಾಗಿದೆ. ಜೊತೆಗೆ ಸಾಮಾಜಿಕ ನ್ಯಾಯದ ವಿರುದ್ಧದ ಶಕ್ತಿಗಳು ಇದನ್ನು ರಾಜಕೀಯ ನಡೆ ಎಂದು ಕರೆಯುತ್ತಾರೆ” ಎಂದಿದ್ದಾರೆ.