ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ


ನವದೆಹಲಿ,ಆ.೪- ದೇಶದಲ್ಲಿ ಕಳೆದ ೫೨ ವರ್ಷಗಳಿಂದ ತ್ರಿವರ್ಣ ಧ್ವಜ ಹಾರಿಸದವರು “ಹರ್ ಘರ್ ತಿರಂಗ” ಅಭಿಯಾನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರ ಧ್ವಜ ಹಾರಿಸದ ಮಂದಿ ತ್ರಿವರ್ಣ ಧ್ವಜದ ಇತಿಹಾಸ ಹೇಳುತ್ತಾ ‘ಹರ್ ಘರ್ ತ್ರಿವರ್ಣ’ ಅಭಿಯಾನ ನಡೆಸುತ್ತಿದ್ದಾರೆ ಎಂದು ಕುಹಕವಾಡಿದ್ದಾರೆ.
ಹರ್ ಘರ್ ತಿರಂಗ ಅಭಿಯಾನದ ಹಿನ್ನೆಲೆಯಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ ಅವರು ಆರೆಸ್‌ಎಸ್ ಉಲ್ಲೇಖಿಸಿ, ಹರ್ ಘರ್ ತಿರಂಗ ಅಭಿಯಾನ ನಡೆಸುತ್ತಿರುವವರು ಸಂಘಟನೆಯಿಂದ ಬಂದವರು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ೫೨ ವರ್ಷಗಳ ಕಾಲ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ ಎಂದು ದೂರಿದ್ದಾರೆ.
ತ್ರಿವರ್ಣ ಧ್ವಜವನ್ನು ಯಾವಾಗಲೂ ಎತ್ತರದಲ್ಲಿಡಲು ಲಕ್ಷಾಂತರ ದೇಶವಾಸಿಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಒಂದು ಸಂಸ್ಥೆ ಯಾವಾಗಲೂ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಲು ನಿರಾಕರಿಸಿತು ಎಂದು ಆರ್ ಎಸ್ ಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳೆದ ೫೨ ವರ್ಷಗಳ ಕಾಲ ನಾಗ್ಪುರದ ಪ್ರಧಾನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ ಮತ್ತು ಅದನ್ನು ನಿರಂತರವಾಗಿ ಅವಮಾನಿಸಲಾಗಿತ್ತು ಎಂದು ದೂರಿದ್ದಾರೆ.
ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗದಲ್ಲಿ ತ್ರಿವರ್ಣ ಧ್ವಜವನ್ನು ನೇಯ್ಗೆ ಮಾಡುವ ಎಲ್ಲ ಕಾರ್ಮಿಕರನ್ನು ಭೇಟಿ ಮಾಡಿದ ಕ್ಷಣ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.