ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಕೈ ಪ್ರತಿಭಟನೆ

ಬೆಂಗಳೂರು,ಜ.೪-ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ೧೫೦ ಕ್ಷೇತ್ರಗಳನ್ನು ಗುರುತಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಹೊಸ ೨೦೨೧ನ್ನು ಹೋರಾಟ ಮತ್ತು ಸಂಘಟನಾತ್ಮಕ ವರ್ಷ ಎಂದು ಘೋಷಣೆ ಮಾಡಿದ್ದೇವೆ. ಹೀಗಾಗಿ ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡುತ್ತೇವೆ. ಅಲ್ಲಿ ಸ್ಥಳೀಯವಾಗಿ ಜನರ ಸಮಸ್ಯೆಗಳನ್ನು ಕೇಳುತ್ತೇವೆ. ಅದನ್ನು ಬಗೆಹರಿಸಲು ಪ್ರತಿಭಟನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಾರಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡಲಿದ್ದೇವೆ ಎಂದು ಹೇಳಿದರು
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಇಂದು ಬೆಂಗಳೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಬಿಬಿಎಂಪಿ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಕರ್ನಾಟಕದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ. ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿರುವ ಒಂದೂವರೆ ಕೋಟಿ ಜನ ಪಾವತಿಸುವ ತೆರಿಗೆಯಿಂದ ರಾಜ್ಯದ ಮುಕ್ಕಾಲುಭಾಗದ ಜನರ ಸೌಲಭ್ಯಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಬೆಂಗಳೂರಿಗೆ ಸ್ವಚ್ಛ, ಹಸಿರು ನಗರ ಎಂಬೆಲ್ಲಾ ಹೆಸರಿತ್ತು. ಕೆಂಪೇಗೌಡರು ಕಟ್ಟಿರುವ ಈ ನಾಡಿನಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದಾರೆ. ಆದರೆ, ಬಿಜೆಪಿ ಆಡಳಿತ ಬಿಬಿಎಂಪಿ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಚುನಾವಣೆ ನಡೆಸಲೂ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ಎಲ್ಲದಕ್ಕೂ ಲಂಚ ಕೊಡಬೇಕಿದೆ. ಕಚೇರಿಯ ಬಾಗಿಲು ಮುಟ್ಟಲೂ ಒಂದು ರೇಟ್ ಫಿಕ್ಸ್ ಆಗಿದೆ. ಕೊರೊನಾ ಸಂದರ್ಭದಲ್ಲಂತೂ ಲೂಟಿ ಹೊಡೆಯಲಾಗಿದೆ. ಹಣ ನೀಡದೆ ಯಾವ ರೋಗಿಯೂ ಸುಲಭವಾಗಿ ಈಚೆ ಬರಲು ಆಗಲಿಲ್ಲ. ಆರೋಗ್ಯ ಸಚಿವರ ಕಾರ್ಯವೈಖರಿಗೆ ಕನ್ನಡಿ ಹಿಡಿಯಬೇಖಿದೆ. ಸೋಂಕಿತರು ೧೦ ಸಾವಿರ ಕೊಟ್ಟು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಇದೆ ಎಂದು ದೂರಿದರು.
ಇರುವ ೮೦೦ ಕೊರೊನಾ ರೋಗಿಗಳಿಗೆ ೧೦ಸಾವಿರ ಬೆಡ್‌ಗಳನ್ನು ಹಾಕಲಾಗಿದೆ. ಉಳಿದ ಬೆಡ್‌ಗಳನ್ನು ಅಧಿಕಾರಿಗಳು, ಸಚಿವರ ಮನೆಗಳಿಗೆ ಹಾಕಿಕೊಳ್ಳಲಿ. ಕೊರೊನಾ ಸಂದರ್ಭದಲ್ಲಿ ವ್ಯಾಪಾರ ವಹಿವಾಟುಗಳು ಮುಚ್ಚಿ ಹೋಗಿವೆ. ಉದ್ಯೋಗ ವಿಲ್ಲದೆ ಜನ ತತ್ತರಿಸಿ ಹೋಗಿದ್ದಾರೆ. ಲಾಕ್‌ಡೌನ್, ಸೀಲ್‌ಡೌನ್ ಹೆಸರಿನಲ್ಲಿ ಮತ್ತಷ್ಟು ತೊಂದರೆ ಮಾಡಲಾಗಿದೆ. ಬ್ಯಾಂಕ್ ಮೂಲಕ ಸಹಾಯ ಮಾಡುವುದಾಗಿ ಹೇಳಲಾಗಿತ್ತು. ಆದರೆ, ಈವರೆಗೂ ಯಾರಿಗೂ ನೆರವು ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.
ಬಿಜೆಪಿ ಸರ್ಕಾರದ ಅವ್ಯವಹಾರಗಳನ್ನು ಬಯಲಿಗೆಳೆಯುವುದೇ ನಮ್ಮ ಉದ್ದೇಶ. ಇಡೀ ವರ್ಷ ಹೋರಾಟ ಮುಂದುವರೆಸುತ್ತೇವೆ. ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದರು.