ಬಿಜೆಪಿ ವಿರುದ್ಧ ಮತ ಚಲಾಯಿಸಲು ಕಾರ್ಮಿಕ ಸಂಘಟನೆ ಕರೆ

ಸಂಜೆವಾಣಿ ನ್ಯೂಸ್
ಮೈಸೂರು.ಏ.15:- ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ನಿರ್ಮಾಣ ವಲಯವನ್ನು ಅತ್ಯಂತ ದುಸ್ಥಿತಿಗೆ ತಳ್ಳಿದೆ. ಇದರಿಂದಾಗಿ ಕೋಟ್ಯಂತರ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕು ಚಿಂತಾಜನಕವಾಗಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಎಲ್ಲರೂ ಬಿಜೆಪಿ ಮತ್ತು ಅದರ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಮನವಿ ಮಾಡಿದೆ.
ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಸಮಿತಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಮಾತನಾಡಿ, ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ಹಕ್ಕುಗಳನ್ನು ದಮನ ಮಾಡಿದೆ. ಈಗ ಇರುವ ಕಲ್ಯಾಣ ಸೌಲಭ್ಯಗಳನು ತೆಗೆದು ಹಾಕುವ ಯತ್ನ ನಡೆಸಿದ್ದುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ, ಮೋದಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಜೀವನ, ಜೀವನೋಪಾಯದ ಮೇಲೆ ವ್ಯವಸ್ಥಿತ ದಾಳಿ ಮಾಡಿ, ದೇಶದ ದುಡಿಯುವ ಜನರಿಗೆ ದ್ರೋಹ ಎಸಗಲಾಗಿದೆ. ಈ ನೀತಿಗಳು ಬೃಹತ್ ಉದ್ಯೋಗ ನಷ್ಟಕ್ಕೆ ಕಾರಣವಾಗಿವೆ. ಬೆಲೆಯೇರಿಕೆ, ಬಡತನ, ಹಸಿವುಗಳನ್ನು ಕಟ್ಟಡ ಕಾರ್ಮಿಕರು ಈ ಅವಧಿಯಲ್ಲಿ ಎದುರಿಸಬೇಕಾಗಿ ಬಂದಿತು. ನೋಟು ಅಮಾನ್ಯೀಕರಣ, ಜಿಎಸ್‍ಟಿಗಳಿಂದಾಗಿ ನಿರ್ಮಾಣ ವಲಯದ ಎಲ್ಲ ಸಾಮಾಗ್ರಿ ಬೆಲೆಯೇರಿವೆ. ಇದಲ್ಲದೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಕಲ್ಯಾಣ ಮಂಡಳಿ ಮತ್ತು ಸೌಲಭ್ಯಗಳು ರದ್ದಾಗುವ ಅಪಾಯವಿದೆ. ಇದರೊಡನೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ವೇಳೆ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ಜೊತೆಗೆ, ನಿರ್ಮಾಣ ಕಂಪನಿಗಳಿಂದ ಬಿಜೆಪಿಗೆ ಸಾವಿರಾರು ಕೋಟಿ ಹಣ ಸಂದಾಯವಾಗಿದೆ. ಚುನಾವಣಾ ಬಾಂಡ್‍ಗಳ ಅತಿ ದೊಡ್ಡ ಫಲಾನುಭವಿ ಬಿಜೆಪಿಯೇ ಆಗಿದೆ ಎಂಬುದು ಬಹಿರಂಗವಾಗಿದೆ. ಇನ್ನು, ಈಚೆಗೆ ಇಸ್ರೇಲ್ ಬಿಕ್ಕಟ್ಟು ವೇಳೆ ಅಲ್ಲಿಗೆ ಭಾರತೀಯ ಕಾರ್ಮಿಕರನ್ನು ಕಳುಹಿಸುವ ಒಪ್ಪಂದ ಕೇಂದ್ರ ಮಾಡಿಕೊಂಡಿದ್ದು, ಇವರಿಗೆ ಯಾವುದೇ ಭದ್ರತೆ ಒದಗಿಸಿಲ್ಲ. ಇದೇ ವೇಳೆ ದೇಶದ ಸೌಹಾರ್ದತೆಗೆ ಅಪಾಯ ಎದುರಾಗಿದುದ, ಈ ಎಲ್ಲ ಅಂಶಗಳನ್ನು ಗಮನಿಸಿ ಈ ಬಾರಿಯ ಚುನಾವಣೆ ವೇಳೆ ಬಿಜೆಪಿ ಹಾಗು ಅದರ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
ಇದಲ್ಲದೆ, ರಾಜ್ಯದಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಾರ್ಮಿಕರ ಹಿತದೃಷ್ಟಿಯಿಂದ ಚುನಾಯಿಸಬೇಕೆಂದು ಕೋರಿದರು.
ಜಿಲ್ಲಾಧ್ಯಕ್ಷ ಎಚ್.ಎಂ. ಬಸವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‍ಕುಮಾರ ಚಿಕ್ಕಬಾಗಿಲು, ಖಜಾಂಚಿ ಸೋಮಶಂಕರ್, ಕೃಷ್ಣ ನರಸೀಪುರ, ಮಹದೇವಸ್ವಾಮಿ ಹಾಗೂ ಇನ್ನಿತರರು ಇದ್ದರು.