ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು, ಫೆ.೨೦- ಸ್ಯಾಂಕಿ ಮೇಲ್ಸೇತುವೆ ಹಾಗೂ ರಸ್ತೆ ವಿಸ್ತರಣೆ ಯೋಜನೆ ಟೆಂಡರ್ ನಲ್ಲಿಯೂ ಕಮಿಷನ್ ಪಡೆಯಲಾಗಿದ್ದು, ಇದೊಂದು ಅವೈಜ್ಞಾನಿಕ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸ್ಯಾಂಕಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಕಾಮಗಾರಿ ವಿರೋಧಿಸಿ ನಗರದಲ್ಲಿಂದು ಮಲ್ಲೇಶ್ವರಂ ನಿವಾಸಿಗಳು ಸ್ಯಾಂಕಿ ರಸ್ತೆಯಲ್ಲಿ ನಡೆಸಿದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ಪಾರಂಪರಿಕ ಮರಗಳನ್ನು ಮೇಲ್ಸೇತುವೆಗಾಗಿ ಕಡಿಯಲಾಗುತ್ತಿದೆ. ಹಸಿರುಮಯವಾಗಿರುವ ಈ ಪ್ರದೇಶ ಇದರಿಂದ ಬರಿದಾಗುತ್ತದೆ. ಹೀಗಾಗಿ, ಹೋರಾಟಗಾರರ ಆಶಯದಂತೆ ಸರ್ಕಾರ ಈ ಯೋಜನೆ ಕೈಬಿಡಬೇಕು ಎಂದರು.
ಸರ್ಕಾರ ವಾಹನ ದಟ್ಟಣೆಗೆ ಸಂಬಂಧಿಸಿದಂತೆ ಅಲ್ಪಕಾಲದ ಪರಿಹಾರಗಳತ್ತ ಮಾತ್ರ ನೋಡಬಾರದು. ಸ್ಯಾಂಕಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಗರಿಕರ ಸಭೆಯನ್ನು ನಡೆಸಬೇಕು ಎಂದ ಅವರು, ಈ ಯೋಜನೆಯಿಂದ ಮಲ್ಲೇಶ್ವರಂ, ಸದಾಶಿವನಗರದ ಪರಿಸರವೇ ಹಾಳಾಗಲಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಹೇಳಿಕೊಳ್ಳುವ ಒಂದು ಕೆಲಸವೂ ಮಾಡುವುದಿಲ್ಲ. ಈ ಯೋಜನೆಯಿಂದ ಯಾರಿಗೂ ಲಾಭ ಗೊತ್ತಿಲ್ಲ. ಆದರೆ, ಇಲ್ಲಿನ ಪರಿಸರ ಸಂಪೂರ್ಣ ಹಾಳಾಗಲಿದೆ ಎಂದು ಹೇಳಿದರು.
ಬಿಬಿಬಿಎಂಪಿ ಮತ್ತಿತರ ಆಡಳಿತ ನಿರ್ಣಯ ಕೈಗೊಳ್ಳುವವರು ಸಾರ್ವಜನಿಕರೊಂದಿಗೆ ಸರಣಿ ಸಮಾಲೋಚನೆ ನಡೆಸಿ, ಜನರ ಹಿತರಕ್ಷಣೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಮೇಲ್ಸೇತುವೆ ನಿರ್ಮಾಣಕ್ಕೆ ಬದಲಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ಇದೇ ವೇಳೆ ಅವರು ಒತ್ತಾಯ ಮಾಡಿದರು.