ಬಿಜೆಪಿ ವಿರುದ್ಧ ಕಾನೂನು ಸಮರ

ಕೇಜ್ರಿ ನಿರ್ಧಾರ

ನವದೆಹಲಿ,ಮೇ.೧೨- ತಿಹಾರ್ ಜೈಲಿನಿಂದ ೫೦ ದಿನಗಳ ಬಳಿಕ ಹೊರ ಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಯ ಸಿದ್ದತೆ ಮತ್ತು ಪ್ರಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಪಕ್ಷದ ಶಾಸಕರೊಂದಿಗೆ ಮಹತ್ವದ ಸಭೆ ನಡೆಸಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿಂದು ಶಾಸಕರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿದ ಅವರು ಚುನಾವಣಾ ಪ್ರಚಾರದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಮತ್ತು ಬಿಜೆಪಿ ವಿರುದ್ದ ಜನತಾ ನ್ಯಾಯಾಲಯದಲ್ಲಿ ಸಮರ ಸಾರಲು ನಿರ್ಧರಿಸಿದ್ದಾರೆ.
ಮದ್ಯನೀತಿ ಅನುಷ್ಠಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂಕೋರ್ಟ್‌ನಿಂದ ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಪಡೆದು ಹೊರ ಬಂದ ನಂತರ ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದಾರೆ.
ನಗರದ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಈ ವೇಳೆ ಪತ್ನಿ ಸುನೀತಾ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇದ್ದರು ಬಳಿಕ ಸಂಜೆ ರಾಷ್ಟ್ರ ರಾಜಧಾನಿಯಲ್ಲಿ ರೋಡ್‌ಶೋ ನಡೆಸಿ ತಮ್ಮ ಶಕ್ತಿ ಸಾಮರ್ಥ್ಯ ಸಾಬೀತು ಪಡಿಸಿದ್ದರು.
ಇಂದು ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷ ವಿರುದ್ಧ ವಾಗ್ದಾಳಿ ನಡೆಸಿದ ಅವರು ಈ ವರ್ಷದ ಸೆಪ್ಟೆಂಬರ್ ೧೭ ರಂದು ಪ್ರಧಾನಿ ನರೇಂದ್ರ ಮೋದಿ ೭೫ ನೇ ವರ್ಷಕ್ಕೆ ಕಾಲಿಡುತ್ತಿರುವ ಕಾರಣ ಅವರ ಬಿಜೆಪಿಯ ಮುಂದಿನ ಪ್ರಧಾನಿ ಯಾರು ಎಂದು ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಇದೇ ಮೇ ೨೫ ರಂದು ದೆಹಲಿಯಲ್ಲಿ ೭ ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ನಾಲ್ಕು ಕ್ಷೇತ್ರಗಳಲ್ಲಿ ಎಎಪಿ ಮತ್ತು ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಿವೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಎನ್‌ಡಿಐಎ ಬಣದ ಪ್ರಧಾನಿ ಅಭ್ಯರ್ಥಿಯಾರು ಎಂದು ಎಲ್ಲೆಡೆ ಕೇಳುತ್ತಿದ್ದಾರೆ. ಇದೇ ಮಾತನ್ನು ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳುತ್ತಿದ್ದೇವೆ. ಈ ವರ್ಷದ ಸೆಪ್ಟಂಬರ್ ೧೭ಕ್ಕೆ ೭೫ ವರ್ಷ ತುಂಬಲಿದೆ. ಬಿಜೆಪಿಯಲ್ಲಿ ಮಾಡಿಕೊಂಡ ನಿಯಮದಂತೆ ಪ್ರಧಾನಿ ಕೆಳಗಿಳಿಯುತ್ತಾರೆ. ಆ ಮೇಲೆ ಯಾರು ಆಸ್ಥಾನಕ್ಕೆ ಎಂದು ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಪ್ರಶ್ನೆ ಮಾಡಿದ್ದಾರೆ