ಬಿಜೆಪಿ ವಿರುದ್ಧ ಅಪಪ್ರಚಾರದಿಂದಾಗಿ ಕಾಂಗ್ರೆಸ್ ಧೂಳಿಪಟ: ಕೇಂದ್ರ ಸಚಿವ ನರೇಂದ್ರಸಿಂಗ್ ತೋಮರ್

ಕಲಬುರಗಿ,ಏ.25: ದೇಶದಲ್ಲಿ ಬಿಜೆಪಿಯ ವಿರುದ್ಧ ಅಪಪ್ರಚಾರ ಮಾಡುತ್ತಿರುವುದರಿಂದ ಕಾಂಗ್ರೆಸ್ ಪಕ್ಷವು ಧೂಳಿಪಟವಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿನ ಮಾಧ್ಯಮ ವಿಭಾಗದ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಪರಿಶ್ರಮ ಹಾಗೂ ಜನರ ಆಶೀರ್ವಾದದಿಂದ ದೇಶದಲ್ಲಿ ಬಿಜೆಪಿ ಗಾಳಿ ಬೀಸಿದೆ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಅಪವಿತ್ರ ಮೈತ್ರಿ ಬಿಜೆಪಿ ಸರ್ಕಾರದ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ ಎಂದು ದೂರಿದರು.
ತಂತ್ರಜ್ಞಾನದ ಮೂಲಕ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ತಡೆಯಲು ಮುಂದಾಗಿದೆ. ಎಸ್‍ಡಿಆರ್‍ಎಫ್. ಎನ್‍ಡಿಆರ್‍ಎಫ್ ಅಡಿಯಲ್ಲಿ ಈಗಾಗಲೇ ಬೆಳೆ ಪರಿಹರ ನೀಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಮಾತನಾಡಲು ಯಾವುದೇ ವಿಚಾರಗಳಿಲ್ಲ. ಬರೀ ಸುಳ್ಳು ಆರೋಪಗಳ ಮೂಲಕ ಎಲ್ಲೆಡೆ ಮೂಲೆಗುಂಪಾಗಿವೆ. ಆದಾಗ್ಯೂ, ಕರ್ನಾಟಕದ ಜನರು ಬಹಳ ಜಾಗರೂಕರಿದ್ದಾರೆ. ಈ ಚುನಾವಣೆಯಲ್ಲಿಯೂ ಜನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಬಿಜೆಪಿಯನ್ನು ತಡೆಯಲು ಅಪವಿತ್ರ ಮೈತ್ರಿ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಅರಾಜಕತೆ ಹಾಗೂ ಭ್ರಷ್ಟಾಚಾರ ಮಿತಿ ಮೀರಿತ್ತು. ಹೀಗಾಗಿ ಕಳೆದ ಬಾರಿ ಬಿಜೆಪಿ ಸರ್ಕಾರ ರಚಿಸಲು ಅವಕಾಶ ಕಲ್ಪಿಸಲಾಗಿತ್ತು. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.
ಸಾಮಾನ್ಯ ವ್ಯಕ್ತಿ ವಿಮಾನದಲ್ಲಿ ಪ್ರಯಾಣಿಸುವ ಕನಸು ಸಹ ಕಾಣೋ ಹಾಗಿರಲಿಲ್ಲ. ಆದಾಗ್ಯೂ, ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳಿಂದ ಸಾಮಾನ್ಯ ಪ್ರಜೆಯೂ ಸಹ ವಿಮಾನದಲ್ಲಿ ಪ್ರಯಾಣಿಸುವ ಹಾಗಾಗಿದೆ. ಒಂದು ಸ್ಥಳದಿಂದ ಉತ್ಪನ್ನಗಳನ್ನು ಮತ್ತೊಂದು ಸ್ಥಳಕ್ಕೆ ಸಾಗಾಟ ಮಾಡಲು ಉಡಾನ್ ಯೋಜನೆ ತರಲಾಗಿದೆ. ಕ್ಯಾಷ್ಲೆಸ್ ಟ್ರಾಂಜೆಜ್ಷ್‍ನಲ್ಲಿ ಜಗತ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕದ ಭವಿಷ್ಯ ದೃಷ್ಟಿಯಿಂದ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ವೆಂಕಟಪ್ರಸಾದ್ ಮಾಲೆಪಾಟಿ, ಗ್ರಾಮಾಂತರ ಜಿಲ್ಲಾ ಕಾರ್ಯಾಧ್ಯಕ್ಷ ಅಶೋಕ್ ಬಗಲಿ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ್ ಬೆಳಮಗಿ, ಬಾಬುರಾವ್ ಪಾಟೀಲ್ ಹಾಗರಗುಂಡಗಿ ಮುಂತಾದವರು ಉಪಸ್ಥಿತರಿದ್ದರು.