ಬಿಜೆಪಿ ವಿರುದ್ದ ಚಂದ್ರಶೇಖರ್ ವಾಗ್ಧಾಳಿ

ಮಾಗಡಿ ಏ, ೯- ಕೆಂದ್ರ ಮತ್ತು ರಾಜ್ಯದಲ್ಲಿ ಧರ್ಮ ಮತ್ತು ಜಾತಿಯ ನಡುವೆ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಬಿಜೆಪಿ ಸರಕಾರದ ವಿರುದ್ಧ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ಪಟ್ಟಣದ ತಿರುಮಲೆಯ ಕುರುಹೀನಶೆಟ್ಟಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜನತಾ ಪಕ್ಷಕ್ಕೆ ಇತರ ಪಕ್ಷದ ಪದಾಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರಕಾರ ೨ ಕುಟುಂಬಕ್ಕೆ ಮಾತ್ರ ಮೀಸಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರು, ನೋಟ್ ಬ್ಯಾನ್, ಜಿಎಸ್‌ಟಿಯನ್ನು ಜಾರಿಗೆ ತಂದಿದ್ದು, ಇದರಿಂದ ದೇಶದ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ದೇಶದಲ್ಲಿ ಅಗತ್ಯ ವಸ್ತುಗಳಾದ ದಿನಸಿ, ಎಣ್ಣೆ, ಪೆಟ್ರೋಲ್, ಡೀಸಲ್ ಬೆಲೆಗಳು ಗಗನಕ್ಕೇರಿದ್ದು, ಬಡವರು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಎಚ್‌ಎಎಲ್, ಬ್ಯಾಂಕ್ ಹಾಗೂ ಇತರೆ ಸರಕಾರಿ ಒಡೆತನದ ಕಂಪನಿಗಳನ್ನು ಬಿಜೆಪಿ ಸರಕಾರ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಬೇಡವಾದ ಚುನಾವಣೆಗಳನ್ನು ಜನರ ಮೇಲೆ ಹೇರುತ್ತಿದ್ದಾರೆ ಎಂದು ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯಾಧ್ಯಕ್ಷ ಪಾಲಾಕ್ಷ ಮಾತನಾಡಿ, ರಾಷ್ಟ್ರ ಮತ್ತು ರಾಜ್ಯ ರಾಜಕಾರಣ ಇಂದಿನ ದಿನಗಳಲ್ಲಿ ಸಂಪೂರ್ಣವಾಗಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ, ಜನಪ್ರತಿನಿಧಿಗಳು ತಮ್ಮನ್ನು ಗೆಲ್ಲಿಸಿದ ಮತದಾರರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಈ ದೇಶಕ್ಕೆ ಎರಡನೇ ಸ್ವಾಂತಂತ್ರ್ಯ ತಂದು ಕೊಟ್ಟಂತಹ ಜನತಾ ಪಕ್ಷವನ್ನು ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಆರಂಭಿಸಿಸಬೇಕೆಂದು ನಮ್ಮೆಲ್ಲರ ಉದ್ದೇಶವಾಗಿದ್ದು, ಮಾಗಡಿ ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಲು ಚಂದನ್ ಅವರನ್ನು ತಾಲೂಕು ಅಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಮುಖಂಡ ಎನ್.ನಾಗೇಶ್ ಮಾತನಾಡಿ, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಮಯದಲ್ಲಿ ಜೆ.ಪಿ ಮುಂತಾದವರು ಸೇರಿಕೊಂಡು ೧೯೭೭ ರಲ್ಲಿ ಜನತಾ ಪಕ್ಷ ಸ್ಥಾಪಿಸಿದರು. ೭೮ ರಲ್ಲಿ ನಮ್ಮ ಪಕ್ಷ ೫೭ ಸ್ಥಾನ ಗಳಿಸಿದ್ದು, ೮೩ ರಲ್ಲಿ ೯೦ ಸ್ಥಾನ ೧೯೮೫ ರಲ್ಲಿ ೧೩೯ ಸ್ಥಾನಗಳನ್ನು ಪಡೆದಿದ್ದು, ರಾಮಕೃಷ್ಣ ಹೆಗ್ಗಡೆ ಅವರು ನಮ್ಮ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. ಅವರ ತತ್ವ ಸಿದ್ಧಾಂತಗಳು ನಮಗೆ ಮಾದರಿಯಾಗಿದೆ ಎಂದರು. ಜಾತಿ ರಹಿತ, ವರ್ಗ ರಹಿತ, ಸರ್ವರಿಗೂ ಸಮಬಾಳು ನೀಡಬೇಕು ಎನ್ನುವ ಉದ್ದೇಶದಿಂದ ಜನತಾ ಪಕ್ಷವನ್ನು ದೇಶದಲ್ಲಿ ಸಂಘಟನೆ ಮಾಡುತ್ತಿದ್ದು, ಶೀಘ್ರವಾಗಿ ಚಾಮರಾಜನಗರದಿಂದ ಬೀದರ್‌ವರೆಗೂ ಪಕ್ಷವನ್ನು ಸಂಘಟಿಸಲಾಗುವುದು ಎಂದು ಹೇಳಿದರು.
ಜನತಾ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಅಬ್ದುಲ್ ಬಶೀರ್, ಚಿಕ್ಕಣ್ಣ, ಈಶ್ವರ್, ಶಂಕರ್‌ಶೆಟ್ಟಿ, ದೀಪ, ಹುಸೇನ್, ಉಪಾಧ್ಯಕ್ಷ ನಂದೀಶ್ ಮತ್ತಿತರರು ಇದ್ದರು.