ಬಿಜೆಪಿ ವಿರುದ್ದ ಕುಟುಂಬದಂತೆ ಸಂಘಟಿತ ಹೋರಾಟ: ಮಮತಾ ಬ್ಯಾನರ್ಜಿ

ಪಾಟ್ನಾ,ಜೂ.22- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಎಲ್ಲಾ ನಾಯಕರು ಬಿಜೆಪಿ ವಿರುದ್ದ ಒಂದು ಕುಟುಂಬದಂತೆ ಹೋರಾಟ ಮಾಡಲಿದ್ದೇವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಾವು ಕುಟುಂಬದಂತೆ ಒಟ್ಟಾಗಿ ಹೋರಾಡುತ್ತೇವೆ, ನಾಳಿನ ಸಭೆಯಲ್ಲಿ ಈ ಸಂಬಂಧ ಹೋರಾಟದ ರೂಪು ರೇಷೆ ಸಿದ್ದ ಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಪಾಟ್ನಾದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರ್ ಜೆಡಿ ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು

ಬಿಹಾರದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಲಾಲೂ ಜಿ ಅವರನ್ನು ತುಂಬಾ ಗೌರವಿಸುತ್ತೇನೆ. ರಾಬ್ರಿ ದೇವಿ, ಲಾಲು ಅವರನ್ನು ಭೇಟಿಯಾಗಿರುವುದು ಸಂತೋಷ ತಂದಿದೆ. ಲಾಲು ಪ್ರಸಾದ್ ಯಾದವ್ ಅವರು ಹಿರಿಯ ನಾಯಕರು ಅವರು ಹಲವು ದಿನಗಳಿಂದ ಜೈಲು ಮತ್ತು ಆಸ್ಪತ್ರೆಯಲ್ಲಿದ್ದರು. ಇಂದು ಅವರನ್ನು ಭೇಟಿಯಾದ ನಂತರ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ಲಾಲು ಪ್ರಸಾದ್ ಯಾದವ್ ಇನ್ನೂ ಫಿಟ್ ಆಗಿದ್ದಾರೆ ಮತ್ತು ಅವರು ಬಿಜೆಪಿ ವಿರುದ್ಧ ಹೋರಾಡುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ನಾಳೆ ಮಹತ್ವದ ಸಭೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ವಿರೋಧ ಪಕ್ಷಗಳ ಸಂಘಟಿತ ಹೋರಾಟದ ರೂಪುರೇಷೆ ಸಿದ್ದ ಪಡಿಸಲು ನಾಳೆ ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿಯ ಮಹತ್ವದ ಸಭೆ ನಡೆಯಲಿದೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕರೆದಿರುವ ನಾಳಿನ ಸಭೆಯಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,, ಪಿಡಿಪಿ ಅಧ್ಯಕ್ಷ್ ಮೆಹಬೂಬ ಮುಫ್ತಿ ಈಗಾಗಲೇ ಪಾಟ್ನಕ್ಕೆ ಆಗಮಿಸಿದ್ದಾರೆ.

ಸಕ್ರ್ಯೂಟ್ ಹೌಸ್‍ನಲ್ಲಿ ಇಬ್ಬರೂ ನಾಯಕರನ್ನು ಭೇಟಿ ಮಾಡಿ ನಿತೀಶ್ ಕುಮಾರ್ ಅವರು ಔಪಚಾರಿಕವಾಗಿ ನಾಳಿನ ಸಭೆಯ ಬಗ್ಗೆ ಚರ್ಚೆ ನಡೆಸಿದರು.