
(ಸಂಜೆವಾಣಿ ವಾರ್ತೆ)
ಚಿತ್ತಾಪುರ: ಮಾ.5:ಪಟ್ಟಣದ ಹಳೆಯ ಸೇಂದಿ ಡಿಪೆÇೀ ಮೈದಾನದಲ್ಲಿ ಮಾ.5 ರಂದು ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಚಿತ್ತಾಪುರ ಮತಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಎಸ್‍ಪಿ ಮತ್ತು ಪರಿಶಿಷ್ಟ ಜಾತಿಯ ಬಲಗೈ ಸಮಾಜ, ಮುಸ್ಲಿಂ ಸಮಾಜ, ಕುರುಬ ಸಮಾಜ, ಈಡಿಗ ಸಮಾಜ ಸೇರಿದಂತೆ ಇತರೆ ಸಮುದಾಯಗಳ ಸುಮಾರು 800 ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರು ನನ್ನ ನಾಯಕತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿತ್ತಾಪುರ ಕ್ಷೇತ್ರದ ಆಕಾಂಕ್ಷಿ ಬಸವರಾಜ ಬೆಣ್ಣೂರಕರ್ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಹಾಗೂ ಯೋಜನೆಗಳನ್ನು ಮೆಚ್ಚಿ ಬಿಎಸ್‍ಪಿ ಮತ್ತು ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಆಗುತ್ತಿರುವುದು ನೋಡಿದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ರಾಜ್ಯದಲ್ಲಿ ಮತ್ತೇ ಅಧಿಕಾರಕ್ಕೆ ಬರಲಿದೆ ಹಾಗೂ ಚಿತ್ತಾಪುರ ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದ್ದು ಚಿತ್ತಾಪುರದ ಚಿತ್ರಣವೇ ಬದಲಾವಣೆಯಾಗಲಿದ್ದು ಪಟ್ಟಣಾದ್ಯಂತ ಬಿಜೆಪಿ ಮಯವಾಗಿದೆ ಎಂದು ತಿಳಿಸಿದರು.
ಚಿತ್ತಾಪುರ ಕ್ಷೇತ್ರದಲ್ಲಿ ಪ್ರತಿ ಭೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದ್ದು ಕಾರ್ಯಕರ್ತರಲ್ಲಿಯೂ ಉತ್ಸಾಹ ಮತ್ತು ಹುಮ್ಮಸ್ಸು ಹೆಚ್ಚಾಗಿದೆ, ಯುವಕರಂತೂ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಮೆಚ್ಚಿ ರಾಜ್ಯದಲ್ಲಿಯೂ ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.