
ಸಂಜೆವಾಣಿ ವಾರ್ತೆ
ಕುರುಗೋಡು:ಮಾ.14: ರಾಜ್ಯ ಬಿಜೆಪಿ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ‘ವಿಜಯ ಸಂಕಲ್ಪ ಯಾತ್ರೆ’ ಮಂಗಳವಾರ ಕುರುಗೋಡು ಪಟ್ಟಣಕ್ಕೆ ಪ್ರವೇಶಿಸಿತು. ಯಾತ್ರೆಯ ಅಂಗವಾಗಿ ಕುರುಗೋಡುನಲ್ಲಿ ಅದ್ಧೂರಿ ರೋಡ್ ಶೋ ನಡೆಯಿತು.
ಪಟ್ಟಣದ ಶ್ರೀ ಗಾದಿಲಿಂಗಪ್ಪ ದೇವಸ್ಥಾನದಿಂದ ಆರಂಭಗೊಂಡ ಯಾತ್ರೆಯು ನಾಡ ಗೌಡರ ಮುಖ್ಯ ವೃತ್ತದ ಮೂಲಕ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದವರೆಗೆ ಸುಮಾರು ಒಂದುವರೆ ಕಿ.ಮಿ. ನಡೆದ ರೋಡ್ ಶೋನಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು. ಈ ಯಾತ್ರೆಯಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸಾಕ್ಷಿಯಾಗಿದ್ದು ಕಂಡುಬಂತು.
ಮೆರವಣಿಗೆಯಲ್ಲಿ ಜಾನಪದ ಕಾಲಮೇಳ, ವಿವಿಧ ವಿಷಭೂಷಣ ದಾರಿಗಳು, ಕಹಳೆ, ಚೆಂಡೆ ವಾದ್ಯ ಮೇಳ, ತಾಳಗಳು, ಗೊಂಬೆಯಾಟದ ಆಕರ್ಷಣೆಯೊಂದಿಗೆ ಕಾರ್ಯಕರ್ತರ ಘೋಷಣೆ ಮೊಳಗಿತು. ಉರಿ ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು ಲವಲವಿಕೆಯಿಂದ ರೋಡ್ ಶೋದಲ್ಲಿ ಭಾಗವಹಿಸಿದ್ದರು.
ವಿಜಯ ಸಂಕಲ್ಪ ಯಾತ್ರೆ ಪಟ್ಟಣದ ನಾಡಗೌಡರ ವೃತ್ತಕ್ಕೆ ಅಗಮಿಸುತ್ತಿದ್ದಂತೆ ಹಾಲುಮತ ಸಮಾಜ ಬಾಂಧವರು ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಅವರಿಗೆ ಕುರಿಮರಿ ನೀಡಿ ಕಂಬಳಿ ಹೊದಿಸಿ ಸನ್ಮಾನಿಸಿ ಗೌರವಿಸಿದರು. ಪಟ್ಟಣದ ವಿವಿಧೆಡೆಯಲ್ಲಿ ಕೇಸರಿಮಯವಾಗಿತ್ತು.
ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ, ಶಾಸಕ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಭಗವಂತ್ ಖೂಬಾ, ಸಚಿವ ಆನಂದ್ ಸಿಂಗ್ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಭಗವಂತ್, ಪ್ರಭು ಚವ್ಹಾಣ್, ಹಾಲಪ್ಪ ಆಚಾರ್, ಆನಂದ್ ಸಿಂಗ್, ಅರವಿಂದ್ ಲಿಂಬವಳಿ, ಬಾಬು ರಾವ್, ಮಾಲಿಕೆಯ ಗುತ್ತೇದಾರ್, ಸಿದ್ದರಾಜು, ಮಾರುತಿ ರಾವ್ ಮೂಳೆ. ರಘುನಾಥ್ ರಾವ್, ಅಮರನಾಥ್ ಪಾಟೀಲ್, ಸಿದ್ದೇಶ್ ಯಾದವ್, ಡಿ.ಕೆ.ಅರುಣ್, ಉಭಯ ಜಿಲ್ಲಾ ಸಂಸದರು ವೈ.ದೇವೇಂದ್ರಪ್ಪ, ಮಾಜಿ ಸಂಸದೆ ಜೆ.ಶಾಂತ, ರಾಯಚೂರು ಮಾಜಿ ಸಂಸದ ಎನ್.ಪಕ್ಕಿರಪ್ಪ, ಗುತ್ತಿಗನೂರು ವಿರೂಪಾಕ್ಷ ಗೌಡ, ಕಂಪ್ಲಿ ಕ್ಷೇತ್ರದ ಮಂಡಲ ಅಧ್ಯಕ್ಷ ಹಳ್ಳಳ್ಳಿ ವೀರೇಶ್ ರಥದಲ್ಲಿದ್ದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಅವರು ವಿಜಯ ಸಂಕಲ್ಪ ಯಾತ್ರೆಯ ನೇತೃತ್ವ ವಹಿಸಿದ್ದರು.