ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ: ರೈತರ ಸಹಾಯಕ್ಕೆ ಧಾವಿಸಲು ಸರ್ಕಾರಕ್ಕೆ ರೇವೂರ್ ಆಗ್ರಹ

ಕಲಬುರಗಿ: ಸೆ.08 : ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಸರ್ಕಾರ ರೈತರ ಸಹಾಯಕ್ಕೆ ಬರಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಒತ್ತಾಯಿಸಿದರು.
ರಾಜ್ಯವ್ಯಾಪಿ ಬಿಜೆಪಿ ರೈತ ಮೋರ್ಚಾ ಕರೆ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆಯಲ್ಲಿ ಹಸಿರು ಶಾಲು ಧರಿಸಿ ಎತ್ತಿನ ಗಾಡಿಯಲ್ಲಿ ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಆವರಿಸಿದೆ. ಜಲಾಶಯಗಳ ನೀರಿನ ಮಟ್ಟ ಕುಸಿದು ಹೋಗಿದೆ.ಇದರಿಂದ ರೈತರ ಜಮೀನುಗಳಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ. ಈಗಾಗಲೇ ರೈತರು ಶೇಕಡಾ 80ರಷ್ಟು ಬೆಳೆಗಳ ಬಿತ್ತನೆ ಮಾಡಿದ್ದು, ಮಳೆಯ ಅಭಾವದಿಂದ ರೈತರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೂಡಲೇ ವಿಷಯಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು, ಸಂಬಂಧ ಪಟ್ಟ ಸಚಿವರು ಗಮನ ಹರಿಸುವ ಮೂಲಕ ತಕ್ಷಣ ರೈತರ ಸಹಾಯಕ್ಕೆ ಬರಬೇಕೆಂದು ಒತ್ತಾಯಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆಯಡಿ ಹತ್ತು ಸಾವಿರ ರೂ.ಗಳ ಧನಸಹಾಯವನ್ನು ರೈತರಿಗೆ ಮಾಡುತ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಪಾಲಿನ 4000ರೂ.ಗಳ ಸಹಾಯಧನವನ್ನು ರದ್ದುಪಡಿಸಿದೆ. ಇಂತಹ ರೈತ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಗರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ರಾಜ್ಯದಲ್ಲಿ ಬರ ಆವರಿಸಿದ್ದು, ಇಲ್ಲಿವರೆಗೂ ಮಳೆಯ ಅಭಾವದಿಂದ ಬೆಳೆ ಕೈಗೆ ಬಾರದೆ ರಾಜ್ಯದಲ್ಲಿ ಸುಮಾರು 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ಆದಾಗ್ಯೂ, ರಾಜ್ಯ ಸರ್ಕಾರವು ಬರ ಪರಿಹಾರ ಕಾರ್ಯಗಳನ್ನು ಆರಂಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳೆಯ ಅಭಾವದಿಂದ ಉಂಟಾಗಿರುವ ಬರದ ಸಮಸ್ಯೆ, ವಿದ್ಯುತ್ ಅಭಾವದಿಂದ ರೈತರ ಪಂಪ್ ಸೆಟ್,ಗಳಿಗೆ ಅನಿಯಮಿತ ಲೋಡ್ ಶೆಡ್ಡಿಂಗ್, ರೈತಪರ ಯೋಜನೆಗಳು ರದ್ದು ಮಾಡಿ ರಾಜ್ಯ ಸರ್ಕಾರ ಸಂಪೂರ್ಣ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಉಪ ಮೇಯರ್ ಶಿವಾನಂದ್ ಪಿಸ್ತಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಭಿಮಾಶಂಕರ್ ಯಳಮೇಲಿ, ಮಹಾದೇವ್ ಬೆಳಮಗಿ, ದಯಾನಂದ್ ಧಾರವಾಡಕರ್, ರಾಜೇಂದ್ರ ಕರೇಕಲ್, ಗಿರಿರಾಜ್ ಯಳಮೇಲಿ, ರಾಚಣ್ಣಾ ಪಟ್ಟಣ್, ಸೂಯ9ಕಾಂತ್ ಡೆಂಗಿ, ಮಲ್ಲಿಕಾರ್ಜುನ್ ಇಟಗಿ ಮುಂತಾದವರು ಪಾಲ್ಗೊಂಡಿದ್ದರು.