ಬಿಜೆಪಿ ರಾಜ್ಯ ಪದಾಧಿಕಾರಿಗಳ ಮಹತ್ವದ ಸಭೆ


@12bc = ಮಸ್ಕಿ, ಬಸವ ಕಲ್ಯಾಣದಲ್ಲೂ ಬಿಜೆಪಿ ಜಯ
ಸಿಂಧನೂರು.ನ.20- ರಾಜ್ಯದಲ್ಲಿ ಇಲ್ಲಿವರೆಗೂ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಯ ಜಯಭೇರಿಯ ಪರ್ವ ಮಸ್ಕಿ ಮತ್ತು ಬಸವ ಕಲ್ಯಾಣ ಉಪ ಚುನಾವಣೆಗಳಲ್ಲಿ ಮುಂದುವರೆಯಲಿದೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರು ಹೇಳಿದರು.
ನಗರದಲ್ಲಿ ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 15 ದಿನಕ್ಕೊಮ್ಮೆ ಪಕ್ಷದ ಪದಾಧಿಕಾರಿಗಳ ಸಭೆ , ತಿಂಗಳಿಗೊಮ್ಮೆ ವಿಶೇಷ ಕಾರ್ಯಕಾರಿಣಿ, 3 ತಿಂಗಳಿಗೊಮ್ಮೆ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸುವ ಮೂಲಕ ಪಕ್ಷವನ್ನು ಸಂಘಟನಾತ್ಮಕವಾಗಿ ಗಟ್ಟಿಗೊಳಿಸಲಾಗುತ್ತದೆಂದರು.
ಸಿಂಧನೂರಿನಲ್ಲಿ ‌ನಡೆಯುವ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ ಕೇವಲ ಚರ್ಚೆ ಮಾಡದೆ ಮುಂದೆ ನಡೆಯುವ ಮಸ್ಕಿ ಮತ್ತು ಬಸವಕಲ್ಯಾಣ ಹಾಗೂ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಗುರಿಯನ್ನಾಗಿಟ್ಟುಕೊಂಡು ಇಲ್ಲಿ ಸಭೆ ಮಾಡಲಾಗುತ್ತಿದೆ. ಜಗತ್ತಿಗೆ ಅಕ್ಕಿ, ಹತ್ತಿ, ಟ್ರಾಕ್ಟರ್ ನೀಡುವ ಮೂಲಕ ಸಿಂಧನೂರು ಪ್ರಸಿದ್ದಿ ಪಡೆದಿದ್ದು, ಇಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷ ತೀವ್ರ ಒತ್ತು ನೀಡುತ್ತಿದೆಂದರು. ಒಂದು ಸಲ ಗೆಲ್ಲಲಾರದ ಶಿರಾದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಅದೇ ರೀತಿ ಆರ್.ಆರ್.ನಗರದಲ್ಲಿ ಪಕ್ಷದ ಅಭ್ಯರ್ಥಿ ವಿಜಯ ಪತಾಕೆ ಆರಿಸಿದ್ದಾರೆ.
ಅಲ್ಲದೆ, 4 ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಸಹ ಪಕ್ಷದ ಅಭ್ಯರ್ಥಿಗಳು ಜಯಭೇರಿ ಸಾಧಿಸಿದ್ದು, ದೇಶದ ಪ್ರಧಾನಿ ಮೋದಿಯವರ ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಅಭಿವೃದ್ಧಿ ಸಾಧನೆಗಳನ್ನು ಜನ ಮನದಲ್ಲಿಟ್ಟುಕೊಂಡು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಿದ್ದಾರೆ. ದೇಶ ಮತ್ತು ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಬೇಲ್ ಮೇಲೆ ಹೊರಗಡೆ ಇದ್ದು, ಮುಖ್ಯಮಂತ್ರಿ ಪದವಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪದವಿಗಾಗಿ ಪಕ್ಷದಲ್ಲೆ ಕಚ್ಚಾಟ ನಡೆದಿದ್ದು, ಜೆಡಿಎಸ್ ಪಕ್ಷದಿಂದ ಬಂದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಪಕ್ಷದ ಸಿದ್ಧಾಂತಗಳನ್ನು ಹೇಳಿಕೊಡುತ್ತಿರುವುದು ಪಕ್ಷದ ಅವನತಿಗೆ ಕಾರಣವಾಗಿದೆ.
ಬಿಜೆಪಿ ‌ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಎದುರಾಳಿಯಾಗದೆ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರುಗಳೆ ಎದುರಾಳಿಗಳಾಗಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಸವಾಲಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿವೃದ್ಧಿ ಸಾಧನೆಗಳನ್ನು ನೋಡಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿ, ಪುನಃ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪಕ್ಷ ಈಗಾಗಲೇ ಕುಟುಂಬ ಮಿಲನ, ಪಂಚ ರತ್ನ, ಮಂಡಲ ಮಟ್ಟದ ಅಭ್ಯಾಸ ವರ್ಗಗಳು, ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ಮಾಡುವ ಮೂಲಕ ಪಕ್ಷವನ್ನು ಸಂಘಟನಾತ್ಮಕವಾಗಿ ಗಟ್ಟಿಗೊಳಿಸಲಾಗುತ್ತದೆ. ಮಸ್ಕಿ ಮತ್ತು ಬಸವ ಕಲ್ಯಾಣ ಚುನಾವಣೆಗಳು ಯಾವಾಗ ಬೇಕಾದರೂ ಘೋಷಣೆ ಯಾದರೂ ಸಹ ಪಕ್ಷ ಚುನಾವಣೆಗೆ ತಯಾರಿಯಲ್ಲಿದ್ದು, ಅಲ್ಲಿ ಸಹ ಪಕ್ಷದ ಅಭ್ಯರ್ಥಿಗಳು ವಿಜಯ‌ ಸಾಧಿಸಲಿದ್ದಾರೆ. ಈಗಾಗಲೇ ಎಷ್ಟು ಸ್ಥಾನಗಳನ್ನು ಗೆದ್ದಿದ್ದೇವೆ, ಯಾವ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎನ್ನುವುದನ್ನು ನೋಡದೆ, ಬೂತ್ ಮಟ್ಟದ ಕಾರ್ಯಕರ್ತರ‌ ಮತ್ತು ಮತದಾರರ ಮನಸ್ಸು ಗೆಲ್ಲುವಂತೆ ಗುರಿ ಇಟ್ಟುಕೊಳ್ಳಿ ಎಂದು ಪ್ರಧಾನಿ ಮೋದಿ ನಮಗೆ ಸೂಚನೆ ನೀಡಿದ್ದು, ಹಾಗಾಗಿ ಬೂತ್‌ ಮಟ್ಟದ ಗೆಲುವಿಗಾಗಿ ಪಕ್ಷ ಗುರಿಯನ್ನಾಗಿಟ್ಟುಕೊಂಡಿದೆಂದರು.
ಸಂಸದ ಸಂಗಣ್ಣ ಕರಡಿ ಸ್ವಾಗತ ಮತ್ತು ಪರಿಚಯ ಮಾಡಿದರೆ, ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು, ಶಾಸಕರಾದ ಕೆ.ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ, ಶಶಿಲ್ ನಮೋಶಿ, ಸಂಸದರಾದ ವಿಜಯೇಂದ್ರ, ಪಕ್ಷದ ಮುಖಂಡರಾದ ರಮಾನಂದ ಯಾದವ್, ನೇಮರಾಜ ನಾಯಕ, ಮಹೇಶ ತೆಂಗಿನಕಾಯಿ, ಸಿದ್ದೇಶ ಯಾದವ್, ಕೊಲ್ಲಾ ಶೇಷಗಿರಿರಾವ್, ತಿಪ್ಪರಾಜು ಹವಾಲ್ದಾರ್, ಅಮರೇಗೌಡ ವಿರುಪಾಪುರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.