ಬಿಜೆಪಿ ರಾಜ್ಯಾಧ್ಯಕ್ಷ ಗಾದಿಗೆ ಹೊಸಬರ ನೇಮಕ:ಜೋಷಿ

ಬೆಂಗಳೂರು,ಮೇ೧೬:ವಿಧಾನಸಭೆಯ ಚುನಾವಣೆಯ ಬೆನ್ನಲ್ಲೆ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಕ್ರಿಯೆಗೆ ವರಿಷ್ಠರು ಮುಂದಾಗಿದ್ದಾರೆ. ಹಾಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಹೊಸಬರ ನೇಮಕ ಮಾಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ತಿಳಿಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷ ನಾಯಕರ ಆಯ್ಕೆಯನ್ನು ಪಕ್ಷದ ವರಿಷ್ಠರು ಬೆಂಗಳೂರಿಗೆ ಬಂದು ನಿರ್ಧಾರ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಷಿ, ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯುಂಟಾಗಿದೆ. ಇದು ನಿರಾಶದಾಯಕ ಫಲಿತಾಂಶ ಎಂದು ಈಗಾಗಲೇ ಹೇಳಿದ್ದೇವೆ. ಈ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಚುನಾವಣೆ ದೃಷ್ಟಿಯಿಂದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿರಲಿಲ್ಲ. ಕಟೀಲ್ ಅವರನ್ನೇ ರಾಜ್ಯಾಧ್ಯಕ್ಷರ ಹುದ್ದೆಯಲ್ಲಿ ಮುಂದುವರೆಸಲಾಗಿತ್ತು. ಈಗ ಹೊಸಬರನ್ನು ಆಯ್ಕೆ ಮಾಡಬೇಕಾಗಿದೆ. ಪ್ರತಿ ಪಕ್ಷ ನಾಯಕರ ಆಯ್ಕೆ ಕುರಿತು ಶಾಸಕಾಂಗ ಪಕ್ಷದ ಸಭೆ ಕರೆದು ತೀರ್ಮಾನ ಮಾಡುತ್ತೇವೆ. ಇದಕ್ಕೂ ಮುನ್ನ ರಾಷ್ಟ್ರೀಯ ನಾಯಕರೊಬ್ಬರು ಬೆಂಗಳೂರಿಗೆ ಭೇಟಿ ನೀಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಜನರು ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜನರಿಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು. ಕಾಂಗ್ರೆಸ್ ಅಧಿಕಾರ ನಡೆಸಲಿ, ಮುಂದೆ ಏನು ಮಾಡುತ್ತಾರೋ ನೋಡೋಣ ಎಂದು ಉತ್ತರಿಸಿದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ದೇಶದ ಜನರು ಸ್ವೀಕರಿಸಿದ್ದಾರೆ. ಅದಕ್ಕೂ ರಾಜ್ಯ ವಿಧಾನಸಭೆಯ ಸೋಲಿಗೂ ಸಂಬಂಧವಿಲ್ಲ. ಯಾವ ಕಾಲದಲ್ಲಿ ಯಾರಿಗೆ ಮತ ಹಾಕಬೇಕು ಎಂಬುದು ಮತದಾರರಿಗೆ ತಿಳಿದಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರ ಆಡಳಿತವನ್ನು ಗಮನಿಸುತ್ತೇವೆ ಎಂದು ಜೋಷಿ ಹೇಳಿದರು.