ಬಿಜೆಪಿ ರಾಜ್ಯಾಧ್ಯಕ್ಷ ಕಟಿಲ್ ನಾಲಾಯಕ್: ಮಧು ಬಂಗಾರಪ್ಪ

ಕಲಬುರಗಿ,ಜ.11: ಕೇವಲ ಹಿಂದೂತ್ವದಿಂದ ಹೊಟ್ಟೆ ತುಂಬುವುದಿಲ್ಲ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಸಾವಿನ ಮೇಲೆ ರಾಜಕೀಯ ಮಾಡುವ ಆಡಳಿತ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟಿಲ್ ಒಬ್ಬ ನಾಲಾಯಕ್ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರು ಆಕ್ರೋಶ ಹೊರಹಾಕಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಳಿನಕುಮಾರ್ ಕಟಿಲ್ ಒಬ್ಬ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ. ಜವಾಬ್ದಾರಿಯುತವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಚರಂಡಿ ಕೇಳಬೇಡಿ, ರಸ್ತೆ ಕೇಳಬೇಡಿ, ನೀರು ಕೇಳಬೇಡಿ, ಜಿಹಾದ್, ಲವ್ ಜಿಹಾದ್ ಬಗ್ಗೆ ಕೇಳಿ ಎಂದು ಭಾವನಾತ್ಮಕ ವಿಷಯಗಳನ್ನು ಮುಂದೆ ಮಾಡಿ ಜಾತಿ, ಜಾತಿಗಳನ್ನು, ಸಮುದಾಯ, ಸಮುದಾಯಗಳನ್ನು ಒಡೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ಮಂಗಳೂರಿನಲ್ಲಿ ಪರಮೇಶ್ ಮೇಸ್ತಾ ಎಂಬ ಹಿಂದೂ ಯುವಕನ ಕೊಲೆ ಆಯಿತು. ಆ ಸಂದರ್ಭದಲ್ಲಿ ಉದ್ರಿಕ್ತರು ನಳಿನಕುಮಾರ್ ಕಟಿಲ್ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಅದಕ್ಕೆ ಕಾರಣ ಯಾರು? ಎಂದು ಪ್ರಶ್ನಿಸಿದ ಅವರು, ಕೇವಲ ಭಾವನಾತ್ಮಕ ವಿಷಯಗಳಿಂದ ಯಾರೂ ಉದ್ಧಾರ ಆಗಲ್ಲ. ಬದಲಿಗೆ ಬಡವರಿಗೆ ಮನೆ ಕೊಡಬೇಕು. ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಅಂತಹ ಬದಲಾವಣೆ ಬಂದೇ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಪದೇ ಪದೇ ಕೋಮು ಗಲಭೆಗಳು ಆಗುತ್ತಿವೆ. ಅದಕ್ಕೆ ಅಲ್ಲಿನ ಆಡಳಿತ ಪಕ್ಷದ ಮಾಜಿ ಮುಖ್ಯಮಂತ್ರಿ ಹಾಗೂ ಸಚಿವರನ್ನೇ ಕೇಳಿ ಎಂದು ಹೇಳಿದ ಅವರು, ಇಷ್ಟಕ್ಕೆಲ್ಲ ರಾಜ್ಯ ಸರ್ಕಾರದ ವೈಫಲ್ಯವೇ ಎಂದು ದೂಷಿಸಿದರು.
ಬಿಜೆಪಿಯನ್ನು ಬ್ರಿಟಿಷ್ ಜನತಾ ಪಾರ್ಟಿ ಎಂದು ಅಣಕಿಸಿದ ಮಧು ಬಂಗಾರಪ್ಪ ಅವರು, ಬ್ರಿಟಿಷರಂತೆಯೇ ಬಿಜೆಪಿಯು ಜನರನ್ನು ಒಡೆದಾಡುವ ನೀತಿಯನ್ನು ಹೊಂದಿದೆ ಎಂದು ಅವರು ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಗೆಯನ್ನು ನೋಡಿದರೆ ಅದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ನಾನು ಒಬಿಸಿ ಅಧ್ಯಕ್ಷನಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ತೆರಳಿ ಘಟಕವನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿರುವೆ. ಕೆಲ ಪದಾಧಿಕಾರಿಗಳು ಹೆಸರಿಗೆ ಮಾತ್ರ ಇದ್ದು, ಅವರನ್ನು ಬದಲಾವಣೆ ಮಾಡಲಾಗುವುದು. ಈಗಾಗಲೇ ನಾನು 24 ಜಿಲ್ಲೆಗಳಲ್ಲಿ ಸಂಚರಿಸಿರುವೆ. ಪ್ರತಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶವನ್ನು ಫೆಬ್ರವರಿ 28ರೊಳಗೆ ಮಾಡಲಾಗುವುದು. ಅದೇ ರೀತಿ ಹಾವೇರಿ ಇಲ್ಲವೇ ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ಹಿಂದುಳಿದ ವರ್ಗದ ಸಮಾವೇಶವನ್ನು ಫೆಬ್ರವರಿ ಅಂತ್ಯ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಮಾಡಲಾಗುವುದು. ಈ ಸಂಬಂಧ ಕಾಂಗ್ರೆಸ್ ವರಿಷ್ಠ ರಾಹುಲ್‍ಗಾಂಧಿ ಅವರನ್ನು ಆಹ್ವಾನಿಸಲಾಗುವುದು. ಈ ಸಂಬಂಧ ಇದೇ ಜನವರಿ 15ರಂದು ಚಂಡಿಗಢದಲ್ಲಿ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಅವರು ತಿಳಿಸಿದರು.
ಇನ್ನು ಈಗಾಗಲೇ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಕಲ್ಯಾಣ ಕರ್ನಾಟಕಕ್ಕೆ ಹತ್ತು ಅಂಶಗಳ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಿಸಿದ್ದಾರೆ. ಅದೇ ರೀತಿ ಕಿತ್ತೂರು ಕರ್ನಾಟಕ, ಮಲೆನಾಡು ಕರ್ನಾಟಕ, ಉತ್ತರ ಕರ್ನಾಟಕ ಮುಂತಾದ ಪ್ರದೇಶಗಳಿಗೂ ಸಹ ಪ್ರತ್ಯೇಕ ಪ್ರಣಾಳಿಕೆಯನ್ನು ಘೋಷಿಸಲಾಗುವುದು. ಈ ಸಂಬಂಧ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಲ್ಲಿ ನಾನು ಉಪಾಧ್ಯಕ್ಷನಾಗಿರುವೆ. ಸ್ಥಳೀಯ ಸಮಸ್ಯೆಗಳನ್ನು ಒಳಗೊಂಡು ಆಯಾ ಜಿಲ್ಲೆಗೆ ಪ್ರಣಾಳಿಕೆ ತಯಾರಿಸಿ, ಮುಖ್ಯ ಪ್ರಣಾಳಿಕೆಯಲ್ಲಿ ಅವುಗಳನ್ನು ಸೇರಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಶಾಸಕ ಎಂ.ವೈ. ಪಾಟೀಲ್, ಮುಖಂಡರಾದ ಶರಣಕುಮಾರ್ ಮೋದಿ, ಕೃಷ್ಣಾಜಿ ಕುಲಕರ್ಣಿ, ಮಲ್ಲಿಕಾರ್ಜುನ್ ಪೂಜಾರಿ, ವಿಜಯಕುಮಾರ್ ಜಿ. ರಾಮಕೃಷ್ಣ, ಅರುಣಕುಮಾರ್ ಎಂ.ವೈ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.