ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆಗೆ ಲಂಬಾಣಿ ಸಂಘ ಒತ್ತಾಯ

ಕೊರಟಗೆರೆ, ನ. ೪- ಅಣ್ಣ-ತಮ್ಮಂದಿರಂತೆ ಜೀವನ ನಡೆಸುತ್ತಿರುವ ಪರಿಶಿಷ್ಟ ಜಾತಿಯ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಬಂಜಾರ ಸಂಘದ ಅಧ್ಯಕ್ಷ ಶ್ರೀರಾಮುಲುನಾಯ್ಕ ಎಚ್ಚರಿಕೆ ನೀಡಿದರು.
ಪಟ್ಟಣದ ವಿಕಾಸಸೌಧ ಆವರಣದಲ್ಲಿ ಕೊರಟಗೆರೆ ಬಂಜಾರ ಸಂಘದ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಸಿರಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರದ ಭರಾಟೆಯಲ್ಲಿ ಪರಿಶಿಷ್ಟ ಜಾತಿಯನ್ನು ಒಡೆಯುವಂತಹ ಕೆಲಸ ಮಾಡಿದ್ದಾರೆ. ಸದಾಶಿವ ಆಯೋಗದ ಬಗ್ಗೆ ಬಹಿರಂಗ ಚರ್ಚೆ ಮಾಡುವ ಧೈರ್ಯ ನಿಮಗಿಲ್ಲವೇ ರಾಜ್ಯಾಧ್ಯಕ್ಷರೇ ಎಂದು ಪ್ರಶ್ನಿಸಿದರು.
ಇನ್ನೆರಡು ವರ್ಷ ಮಾತ್ರ ನಿಮ್ಮ ಅಧಿಕಾರ. ನಂತರ ನೀವು ಚುನಾವಣೆ ಎದುರಿಸುವಾಗ ನಿಮ್ಮ ಕ್ಷೇತ್ರಕ್ಕೆ ನಾವೇ ಖುದ್ದಾಗಿ ಬರುತ್ತೇವೆ. ಆಗ ನಿಮ್ಮ ಶಕ್ತಿ ತೋರಿಸುವ ಪ್ರಯತ್ನ ಮಾಡಿ ಎಂದರು.
ಕೊರಟಗೆರೆ ಬಂಜಾರ ಸಂಘದ ಸಂಘಟನಾ ಕಾರ್ಯದರ್ಶಿ ವಿಜಯಶಂಕರ್ ಮಾತನಾಡಿ, ಸದಾಶಿವ ಆಯೋಗದ ವರದಿಯೇ ಅವೈಜ್ಞಾನಿಕವಾಗಿದೆ. ಲಂಬಾಣಿ ಸಮುದಾಯದ ಶೇ.೯೦ ರಷ್ಟು ಜನರಿಗೆ ಉದ್ಯೋಗವಿಲ್ಲದೇ ಅನ್ಯ ರಾಜ್ಯಗಳಿಗೆ ಒಲಸೆ ಹೋಗಿದ್ದಾರೆ. ಬಿಜೆಪಿ ಸರ್ಕಾರ ಮೊದಲು ತಾಂಡವನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ ಅಭಿವೃದ್ದಿಪಡಿಸುವ ಪ್ರಯತ್ನ ಮಾಡಬೇಕು. ಸಮುದಾಯದ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ನಿಲ್ಲಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಯ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಯನ್ನು ತೆಗೆಯುವ ಹುನ್ನಾರವೇ ಸದಾಶಿವ ಆಯೋಗದ ಉದ್ದೇಶವಾಗಿದೆ. ಉಪ ಚುನಾವಣೆಗೆ ಮತ ಹಾಕುವ ವೇಳೆ ನಮ್ಮ ಶಕ್ತಿಯನ್ನು ತೋರಿಸುವ ಪ್ರಯತ್ನ ಮಾಡುತ್ತೇವೆ. ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಲಂಬಾಣಿ ಸಮುದಾಯದ ಜತೆ ಕ್ಷಮೆ ಕೇಳಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಜಾರ ಸಂಘದ ಗೌರವಧ್ಯಕ್ಷ ಮೀಸೆಲಕ್ಷ್ಮನಾಯ್ಕ, ಖಜಾಂಚಿ ಕಾಳಿಚರಣ್, ಮುಖಂಡರಾದ ಲಕ್ಷ್ಮನಾಯ್ಕ, ಮುರುಳಿನಾಯ್ಕ, ಶಂಕರನಾಯ್ಕ, ಲಚ್ಚಿರಾಮ, ಗೋಪಿನಾಯ್ಕ, ರಾಮಚಂದ್ರನಾಯ್ಕ, ಸಿದ್ದೇಶ್, ಕಾಳಿಂಗನಾಯ್ಕ, ಲಂಕೇಶನಾಯ್ಕ, ಕೃಷ್ಣನಾಯ್ಕ, ನಾಗೇಶಯ್ಯ ಮತ್ತಿತರರು ಉಪಸ್ಥಿತರಿದ್ದರು.