ಬಿಜೆಪಿ ಮೊದಲ ಪಟ್ಟಿ ಅಖೈರು

ಮೋದಿ ನೇತೃತ್ವದಲ್ಲಿ ಸಭೆ

ನವದೆಹಲಿ,ಮಾ.೧- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ೪೦೦ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತಡರಾತ್ರಿ ನಡೆದ ಕೇಂದ್ರ ಚುನಾವಣಾ ಸಮಿತಿ ಅಳೆದು ತೂಗಿ ಮೊದಲ ಪಟ್ಟಿಯನ್ನು ಅಖೈರು ಮಾಡಿದ್ದು ಸದ್ಯದಲ್ಲಿಯೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಗುರುವಾರ ತಡರಾತ್ರಿಯವರೆಗೂ ಸಭೆ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್ ಸೇರಿದಂತೆ ಘಟಾನುಘಟಿ ನಾಯಕರುಗಳ ಹೆಸರಿದ್ದು, ೧೫೦ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಆದಷ್ಟು ಶೀಘ್ರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ.
ಮೊದಲ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಹೆಸರುಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಹೇಳಲಾಗಿದೆ.
ನಿನ್ನೆ ತಡರಾತ್ರಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಸಂಸದೀಯ ಮಂಡಳಿಯ ಸದಸ್ಯರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಸುದೀರ್ಘ ಸಭೆ ನಡೆಸಿ ಮೊದಲ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಈ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೇರಿದಂತೆ ವಿವಿಧ ರಾಜ್ಯಗಳ ನಾಯಕರು ಸಭೆಯಲ್ಲಿ ಹಾಜರಿದ್ದರು.
ಖ್ಯಾತನಾಮರಿಗೂ ಟಿಕೆಟ್ ಚರ್ಚೆ.
ನಿನ್ನೆಯ ಸಭೆಯಲ್ಲಿ ಖ್ಯಾತ ನಟ ಅಕ್ಷಯ್‌ಕುಮಾರ್, ನಟಿ ಕಂಗನಾ ರಣಾವತ್ ಸೇರಿದಂತೆ ಹಲವು ಖ್ಯಾತ ನಾಮರಿಗೆ ಚುನಾವಣಾ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆದಿದ್ದು, ಸೆಲೆಬ್ರಿಟಿಗಳಿಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನಗಳು ಆಗಿಲ್ಲ. ಹಾಗೆಯೇ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕಿಯಾಗಿದ್ದ ದಿವಂಗತ ಸುಷ್ಮಾಸ್ವರಾಜ್ ಅವರ ಪುತ್ರಿ ಭಾನ್ಸುರಿ ಸ್ವರಾಜ್ ಅವರಿಗೂ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಪ್ರಸ್ತುತ ರಾಜ್ಯಸಭೆ ಸದಸ್ಯರಾಗಿರುವ ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್ ಮತ್ತು ಎಸ್. ಜೈಶಂಕರ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಅಂತಿಮವಾಗಿದ್ದು ಯಾವ ರಾಜ್ಯ ಮತ್ತು ಕ್ಷೇತ್ರ ಎನ್ನುವುದು ಸದ್ಯದಲ್ಲಿಯೇ ತಿಳಿಯಲಿದೆ ಎಂದು ಹೇಳಲಾಗಿದೆ.

ದೆಹಲಿಯಲ್ಲಿ ಸರಣಿ ಸಭೆ
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದು, ನಿನ್ನೆ ತಡರಾತ್ರಿವರೆಗೂ ಸಭೆ ನಡೆಸಿರುವ ಬಿಜೆಪಿ ನಾಯಕರು, ಇಂದೂ ಸಹ ಬಿಜೆಪಿ ನಾಯಕರುಗಳು ಸಭೆಗಳನ್ನು ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ರಾಜ್ಯಸಭೆ ಹಾಗೂ ಲೋಕಸಭೆಯ ಸಂಸದರುಗಳ ಸಭೆಗಳು ನಡೆದಿವೆ.
ನಾಳೆ ಜೆಪಿ ನಡ್ಡಾ ಅವರು ಎಲ್ಲ ರಾಜ್ಯಗಳ ಚುನಾವಣಾ ಉಸ್ತುವಾರಿಗಳೊಂದಿಗೆ ದೆಹಲಿಯಲ್ಲಿ ಸಭೆ ನಡೆಸುವರು.