ಬಿಜೆಪಿ ಮೊದಲ ಪಟ್ಟಿಗೆ ಕ್ಷಣಗಣನೆ

ಬೆಂಗಳೂರು, ಏ. ೧೦- ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ೧೮೦ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಸಂಜೆ ಬಿಡುಗಡೆ ಮಾಡಲಿದೆ. ಹಾಲಿ ಶಾಸಕರಲ್ಲಿ ಸುಮಾರು ೨೦ ಮಂದಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಗಳಿದ್ದು, ವಲಸಿಗ ಶಾಸಕರಲ್ಲೂ ೩-೪ ಮಂದಿಗೆ ಟಿಕೆಟ್ ಸಿಗುವುದು ಅನುಮಾನ. ಉಳಿದಂತೆ ಎಲ್ಲ ಸಚಿವರು, ಶಾಸಕರುಗಳಿಗೆ ಟಿಕೆಟ್ ಖಾತ್ರಿಯಾಗಿದೆ.ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಳೆದ ೨ ದಿನಗಳಿಂದ ಎಲ್ಲವನ್ನು ಅಳೆದು ತೂಗಿ ಪಟ್ಟಿ ಸಿದ್ದಪಡಿಸಲಾಗಿದ್ದು, ಯಾರಿಗೆಲ್ಲ ಟಿಕೆಟ್ ಕೈ ತಪ್ಪುತ್ತದೆ ಎಂಬುದು ಕುತೂಹಲ ಮೂಡಿಸಿದೆ.ಟಿಕೆಟ್ ಪಟ್ಟಿ ಸಿದ್ದಪಡಿಸುವ ಸಂದರ್ಭದಲ್ಲಿ ಗುಜರಾತ್ ಮಾದರಿಯಾಗಲೀ, ಉತ್ತರ ಪ್ರದೇಶ ಮಾದರಿಯನ್ನಾಗಲೀ ಅನುಸರಿಸದೆ ಸಮೀಕ್ಷಾ ವರದಿ ಹಾಗೂ ಗೆಲುವಿನ ಮಾನದಂಡದ ಮೇಲೆ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಹಾಗಾಗಿ ಕೆಲ ಹಿರಿಯರಿಗೂ ಟಿಕೆಟ್ ಸಿಗಲಿದೆ.ಈ ಮೊದಲು ೭೦ ವರ್ಷ ದಾಟಿದವರಿಗೆ ಟಿಕೆಟ್ ಸಿಗಲ್ಲ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬಂದಿದ್ದವಾದರೂ ವರಿಷ್ಠರು ವಯಸ್ಸನ್ನು ಗಣನೆಗೆ ತೆಗೆದುಕೊಳ್ಳದೆ ಗೆಲುವಿನ ಮಾನದಂಡವನ್ನು ಗಣನೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.ಬಿಜೆಪಿಯ ಹಾಲಿ ಶಾಸಕರಲ್ಲಿ ಸುಮಾರು ೨೦-೨೫ ಮಂದಿ ಗೆಲ್ಲುವುದು ಕಷ್ಟ. ಇವರಿಗೆ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಇದೆ ಎಂಬ ಸಮೀಕ್ಷಾ ವರದಿಗಳನ್ನು ಆಧರಿಸಿ ೨೦ ಮಂದಿಗೆ ಟಿಕೆಟ್ ಮಂದಿಗೆ ಟಿಕೆಟ್ ನೀಡದಿರುವ ತೀರ್ಮಾನವೂ ಆಗಿದ್ದು, ಯಾವೆಲ್ಲಾ ಶಾಸಕರಿಗೆ ಟಿಕೆಟ್ ಕೈತಪ್ಪುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಬಿಜೆಪಿಯ ಪಟ್ಟಿ ಬಿಡುಗಡೆಗೂ ಮುನ್ನವೇ ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವ ಶಾಸಕರುಗಳು ಟಿಕೆಟ್‌ಗಾಗಿ ತಮ್ಮ ಗಾಡ್ ಫಾದರ್‌ಗಳ ಮೂಲಕ ಪ್ರಯತ್ನ ನಡೆಸಿದ್ದಾರೆ.ಇದರ ನಡುವೆಯೂ ಟಿಕೆಟ್ ಆಕಾಂಕ್ಷಿಗಳಾಗಿರುವ ಹೊಸ ಮುಖಗಳು ತಮಗೆ ಟಿಕೆಟ್ ಸಿಗುತ್ತದೆಯೋ, ಇಲ್ಲವೋ ಎಂಬ ಆತಂಕದಲ್ಲಿ ಇದ್ದಾರೆ.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸರಣಿ ಸಭೆಗಳು ನಡೆದಿದ್ದು, ಕಗ್ಗಂಟ್ಟಾಗಿರುವ ೪೦ ರಿಂದ ೪೫ ಕ್ಷೇತ್ರಗಳನ್ನು ಹೊರತುಪಡಿಸಿ ೧೮೦ ಕ್ಷೇತ್ರಗಳಿಗೆ ಬಿಜೆಪಿ ಇಂದು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದೆ.ಕಳೆದ ಶುಕ್ರವಾರ, ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ರಾಜ್ಯ ನಾಯಕರುಗಳು ಹಾಗೂ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದರು.ನಿನ್ನೆ ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಗಳು ನಡೆದು ಪಟ್ಟಿಯನ್ನು ಅಂತಿಮಗೊಳಿಸಲಾಗಿತ್ತಾದರೂ ಇಂದು ಬೆಳಿಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಪಟ್ಟಿಯನ್ನು ಪ್ರಕಟಿಸುವ ನಿರ್ಧಾರ ಮಾಡಲಾಗಿತ್ತು.
ಅದರಂತೆ ಇಂದು ಬೆಳಿಗ್ಗೆಯೂ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಬಿಜೆಪಿ ವರಿಷ್ಠರು ಹಾಗೂ ರಾಜ್ಯ ನಾಯಕರುಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ನೀಡಲಾಯಿತು. ನಂತರ ಮತ್ತೆ ಮಧ್ಯಾಹ್ನ ಜೆ.ಪಿ. ನಡ್ಡಾ ನಿವಾಸದಲ್ಲಿ ಅಂತಿಮ ಸುತ್ತಿನ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಯಿತು.ತೀವ್ರ ಪೈಪೋಟಿ ಇರುವ ಹಾಗೂ ಬಂಡಾಯ ಸ್ಪರ್ಧೆಯ ಸುಳಿವು ಇರುವ ೪೦-೪೫ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದು, ಈ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ೧೮೦ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದ್ದು, ಸಂಜೆ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವರಿಷ್ಠರು ಪಟ್ಟಿಯನ್ನು ಪ್ರಕಟಿಸುವರು ಎಂದು ಬಿಜೆಪಿ ಮೂಲಗಳು ಹೇಳಿವೆ.ಅಭ್ಯರ್ಥಿಗಳ ಆಯ್ಕೆ ಕಗ್ಗಂಟ್ಟಾಗಿರುವ ಕ್ಷೇತ್ರಗಳಿಗೆ ಏ. ೧೩ರ ನಂತರ ಹೆಸರುಗಳನ್ನು ಪ್ರಕಟಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಬಂಡಾಯ, ಅಸಮಾಧಾನ, ಅತೃಪ್ತಿಗಳಾಗದಂತೆ ಎಚ್ಚರಿಕೆಯಿಂದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ದೆಹಲಿಯ ನಿವಾಸದಲ್ಲಿ ಇಂದು ಬೆಳಿಗ್ಗೆಯಿಂದಲೇ ಸಭೆ ನಡೆದಿದ್ದು, ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್, ಸಿ.ಟಿ. ರವಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿ ಮನ್ಸೂನ್ ಮಾಂಡವೀಯ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಸೇರಿದಂತೆ ಎಲ್ಲ ಪ್ರಮುಖ ನಾಯಕರುಗಳು ಭಾಗಿಯಾಗಿ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ನೀಡಿದ್ದಾರೆ.
ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್
ಬಿಜೆಪಿ ಇಂದು ಸಂಜೆ ಬಿಡುಗಡೆ ಮಾಡಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸುಮಾರು ೨೦ ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್ ಸಿಗುವುದು ನಿಶ್ಚಿತ. ಹಾಗೆಯೇ ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಿಜೆಪಿ ಸೇರ್ಪಡೆಯಾಗಿರುವ ವಲಸಿಗ ಸಚಿವರಿಗೆ ಟಿಕೆಟ್ ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ವಲಸಿಗ ಶಾಸಕರಲ್ಲಿ ಒಂದಿಬ್ಬರಿಗೆ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗಿದೆ.
ಸಮೀಕ್ಷಾ ವರದಿಗಳ ಪ್ರಕಾರ ಹಾಲಿ ಶಾಸಕರಲ್ಲಿ ಕೆಲವರು ಗೆಲ್ಲುವುದು ಕಷ್ಟ ಎಂಬ ವರದಿಗಳನ್ನು ಆಧರಿಸಿ ೧೦-೧೨ ಶಾಸಕರಿಗೆ ಟಿಕೆಟ್ ನಿರಾಕರಿಸಿ ಅಲ್ಲೆಲ್ಲಾ ಹೊಸ ಮುಖಗಳಿಗೆ ಟಿಕೆಟ್ ನೀಡುವ ತೀರ್ಮಾನವನ್ನು ಮಾಡಲಾಗಿದೆ.

ಟಿಕೆಟ್ ಕೈ ತಪ್ಪಲಿರುವ ಹಾಲಿ ಶಾಸಕರುಗಳು
ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ, ಹಾವೇರಿಯ ನೆಹರು ಓಲೇಕಾರ್, ದಾವಣಗೆರೆ ಉತ್ತರದ ಎಸ್.ಎ. ರವೀಂದ್ರನಾಥ್, ಮಾಯಕೊಂಡದ ಲಿಂಗಣ್ಣ, ಕಲಘಟಗಿಯ ನಿಂಬಣ್ಣನವರ್, ನವಲಗುಂದದ ಕಳಕಪ್ಪಬಂಡಿ, ಶಿರಹಟ್ಟಿಯ ರಾಮಣ್ಣ ಲಮಾಣಿ, ಚನ್ನಗಿರಿಯ ಮಾಡಾಳ್ ವಿರೂಪಾಕ್ಷಪ್ಪ, ಹೊಸದುರ್ಗದ ಗೊಳಿಹಟ್ಟಿ ಶೇಖರ್, ಚಿತ್ರದುರ್ಗದ ತಿಪ್ಪಾರೆಡ್ಡಿ, ಅಥಣಿಯ ಮಹೇಶ್ ಕುಮಟಹಳ್ಳಿ, ಶಿರಗುಪ್ಪದ ಸೋಮಲಿಂಗಪ್ಪ, ಸುಳ್ಯದ ಎಸ್. ಅಂಗಾರ, ಕಾಪುವಿನ ಲಾಲಜಿ ಮೆಂಡನ್, ವಿರಾಜಪೇಟೆಯ ಕೆ.ಜಿ. ಬೋಪಯ್ಯ, ಕಾಗವಾಡದ ಶ್ರೀಮಂತಪಾಟೀಲ, ಕುಂದಾಪುರದ ಹಾಲಾಡಿ ಶ್ರೀನಿವಾಸಶೆಟ್ಟಿ, ಕನಕಗಿರಿಯ ಬಸವರಾಜ ದಡೆಸುಗೂರು, ಬೈಂದೂರಿನ ಸುಕುಮಾರಶೆಟ್ಟಿ ಪುತ್ತೂರಿನ ಸಂಜೀವ್ ಮಠಂದೂರು ಇವರುಗಳಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿವೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸಂಜೆ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಗಳು ನಡೆದಿವೆ. ಇಂದು ಸಂಜೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.