ಬಿಜೆಪಿ ಮುಖಂಡ ಪ್ರವೀಣ್ ಪಂಚಭೂತಗಳಲ್ಲಿ ಲೀನ: ಮೆರವಣಿಗೆ ವೇಳೆ ಉದ್ರಿಕ್ತ-ಲಾಠಿಪ್ರಹಾರ

ಮಂಗಳೂರು, ಜು.27- ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರ ಕುಟುಂಬ ಸದಸ್ಯರ ಶೋಕಸಾಗರದ ಮಧ್ಯೆ ಅಂತ್ಯಕ್ರಿಯೆ ಇಂದು ನೆರವೇರಿಸಲಾಯಿತು.
ಪ್ರವೀಣ್ ಕಳೇಬರವನ್ನು ಪುತ್ತೂರಿನಿಂದ ಮೆರವಣಿಗೆ ಮೂಲಕ ಅವರ ನಿವಾಸಕ್ಕೆ ತರಲಾಯಿತು.
ಸಾರ್ವಜನಿಕ ದರ್ಶನದ ಬಳಿಕ ಬಿಲ್ಲವ ವಿಧಿ ವಿಧಾನದ ಅನುಸಾರ ಅಂತ್ಯಕ್ರಿಯೆ ನಡೆಸಲಾಯಿತು. ಮಂತ್ರ ಘೋಷಣೆಯ ಬಳಿಕ ಮೂವರು ಮಾವಂದಿರಾದ ಶೀನಪ್ಪ ಪೂಜಾರಿ, ಲಿಂಗಪ್ಪ ಪೂಜಾರಿ ಹಾಗೂ ಲೋಕೇಶ್ ಪೂಜಾರಿ ಪ್ರವೀಣ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಮೂಲಕ ಪ್ರವೀಣ್ ಪಂಚಭೂತಗಳಲ್ಲಿ ವಿಲೀನರಾದರು.ಈ ವೇಳೆ ಸಂಘ ಪರಿವಾರದ ಕಾರ್ಯಕರ್ತರು ಪಾಲ್ಗೊಂಡು ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸಿದರು.

ಪರಿಸ್ಥಿತಿ ಉದ್ವಿಗ್ನ

ಪ್ರವೀಣ್ ಕೊಲೆಯಿಂದಾಗಿ ಬೆಳ್ಳಾರೆ ಉದ್ವಿಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಸಚಿವರಾದ ಸುನೀಲ್‌ಕುಮಾರ್, ಅಂಗಾರ, ಹರೀಶ್ ಪೂಂಜಾ ಅವರನ್ನು ಸುತ್ತುವರೆದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ನಳಿನ್‌ ಕುಮಾರ್ ಅವರ ಕಾರನ್ನು ಕಾರ್ಯಕರ್ತರು ಮೇಲಕ್ಕೆ ಎತ್ತಲು ಪ್ರಯತ್ನಿಸಿದ್ದಾರೆ.
ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೂ ಪ್ರತಿಭಟನೆಯ ಬಿಸಿ ತಟ್ಟಿತು. ನ್ಯಾಯಬೇಕು ಎಂದು ಘೋಷಣೆ ಕೂಗಿದರು. ಇದರಿಂದಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಸಯಿತು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದರು. ಅದರೆ ಪರಿಸ್ಥಿತಿ ಕೈ ಮೀರಿದ ಹಿನ್ನೆಲೆಯಲ್ಲಿ ಖಾಕಿ ಪಡೆ ಲಾಠಿ ಪ್ರಹಾರ ನಡೆಸಿದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿದರು. ಈ ವೇಳೆ ಓರ್ವ ವ್ಯಕ್ತಿ ಗಾಯಗೊಂಡರು.
ಬಿಜೆಪಿ ಮುಖಂಡನ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.