ಬಿಜೆಪಿ ಮುಖಂಡ ಗಿರೀಶ್ ಚಕ್ರ ಕೊಲೆ: ನಾಲ್ವರು ಆರೋಪಿಗಳ ಸೆರೆ

ಕಲಬುರಗಿ,ಮಾ.5-ಬಿಜೆಪಿ ಮುಖಂಡ ಹಾಗೂ ಸಂಸದ ಡಾ.ಉಮೇಶ್ ಜಾಧವ್ ಅವರ ಬೆಂಬಲಿಗ ಗಿರೀಶ ಬಾಬು ತಂದೆ ಬಸಣ್ಣ ಚಕ್ರ (31) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಫಲಪುರ ತಾಲ್ಲೂಕಿನ ಸಾಗನೂರ ಗ್ರಾಮದ ಸಚಿನ್ ತಂದೆ ಶರಣಪ್ಪ ಕಿರಸಾವಳಗಿ (21), ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದ ವಿಶ್ವನಾಥ ಅಲಿಯಾಸ್ ಕುಮಾರ್ ಅಲಿಯಾಸ್ ಕುಮ್ಯಾ ತಂದೆ ದಿ.ಸೋಮರಾಯ ಮಂಜಾಳಕರ್ (22), ಪ್ರಜ್ವಲ್ ಅಲಿಯಾಸ್ ಪುಟ್ಯಾ ತಂದೆ ಪಾಯಪ್ಪ ಭಜಂತ್ರಿ (19) ಮತ್ತು ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿತ ಆರೋಪಿಗಳಾಗಿದ್ದಾರೆ.
ಅಫಜಲಪುರ ತಾಲ್ಲೂಕಿನ ಸಾಗನೂರ ಗ್ರಾಮದ ಗಿರೀಶ್ ಬಾಬು ಅವರು ಬಿಎಸ್‍ಎನ್‍ಎಲ್ ಸಲಹಾ ಸಮಿತಿ ನಿರ್ದೇಶಕರಾಗಿ ನೇಮಕವಾದ ಹಿನ್ನೆಲೆಯಲ್ಲಿ ಸನ್ಮಾನಿಸಿ ಪಾರ್ಟಿ ಕೊಡುವುದಾಗಿ ಹೇಳಿ ಆರೋಪಿಗಳು ಅವರನ್ನು ಉಮ್ಮರಗಿ ಸೀಮಾಂತರದ ರಮೇಶ ಗಡಗಿ ಎಂಬುವವರ ಹೊಲಕ್ಕೆ ಕರೆದುಕೊಂಡು ಹೋಗಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಮೃತನ ಸಹೋದರ ಮಲ್ಲಣ್ಣ ಚಕ್ರ ಅವರು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಎಸ್‍ಪಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಆಳಂದ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಅಫಜಲಪುರ ಸಿಪಿಐ ಚನ್ನಯ್ಯ ಎಸ್.ಹಿರೇಮಠ ಅವರ ನೇತೃತ್ವದಲ್ಲಿ ದೇವಲಗಾಣಗಾಪುರ ಪಿಎಸ್‍ಐ ಪರಶುರಾಮ ಜೆ.ಸಿ, ಅಫಲಪುರ ಪಿಎಸ್‍ಐ ಮಹಿಬೂಬ್ ಅಲಿ, ಸಿಬ್ಬಂದಿಗಳಾದ ಆನಂದ, ಸಂತೋಷ ಮಲಗಾಣ, ಯಲ್ಲಾಲಿಂಗ ಭಜಂತ್ರಿ, ಶಿವು ಕಲ್ಲೂರ ಅವರನ್ನೊಳಗೊಂಡ ಎರಡು ವಿಶೇಷ ತಂಡಗಳು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ವೈಯಕ್ತಿಕ ದ್ವೇಷದ ಹಿನ್ನೆಲಯಲ್ಲಿ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದ್ದು, ಕೊಲೆಗೆ ಇತರೆ ಕಾರಣಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್‍ಪಿ ಮತ್ತು ಹೆಚ್ಚುವರಿ ಎಸ್‍ಪಿ ಶ್ಲಾಘಿಸಿದ್ದಾರೆ.