
ಶಿವಮೊಗ್ಗ, ಏ.೭- ಕಾಂಗ್ರೆಸ್‌ನ ೨ನೇ ಪಟ್ಟಿ ಸಿದ್ಧತೆ ಸಂದರ್ಭದಲ್ಲಿ ಅಭ್ಯರ್ಥಿಗಳಿಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ಮುಖಂಡರುಗಳನ್ನು ಸಂಪರ್ಕಿಸಿ ಅಭ್ಯರ್ಥಿಯಾಗುವಂತೆ ಕೋರಿದ್ದರು ಎಂಬ ಸ್ಫೋಟಕ ಹೇಳಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨ನೇ ಪಟ್ಟಿ ಸಿದ್ಧತೆ ವೇಳೆ ಡಿ.ಕೆ. ಶಿವಕುಮಾರ್ ನಮ್ಮವರನ್ನು ಸಂಪರ್ಕಿಸಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ೬೦ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ಬಿಜೆಪಿಯವರನ್ನು ಸಂಪರ್ಕ ಮಾಡಿದ್ದಾರೆ. ೨ನೇ ಪಟ್ಟಿ ಸಿದ್ಧತೆ ವೇಳೆ ಡಿ.ಕೆ. ಶಿವಕುಮಾರ್ ನಮ್ಮ ಪಕ್ಷದ ನಾಯಕರುಗಳನ್ನು ಸಂಪರ್ಕಿಸಿದ್ದರು ಎಂದರು.
ಕಾಂಗ್ರೆಸ್‌ನವರು ಏನು ಮಾಡಿದರೂ ಚುನಾವಣೆಯಲ್ಲಿ ಗೆಲ್ಲಲ್ಲ, ಕಳೆದ ಬಾರಿಗಿಂತ ಹೀನಾಯವಾಗಿ ಸೋಲುತ್ತಾರೆ ಎಂದರು.
ನಟ ಕಿಚ್ಚಾ ಸುದೀಪ್ ಬಿಜೆಪಿಗೆ ಬೆಂಬಲ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಷ್ಟದಲ್ಲಿರುವಾಗ ಸಹಾಯ ಮಾಡಿದವರಿಗೆ ಬೆಂಬಲ ನೀಡುತ್ತೇನೆ ಎಂದು ಸುದೀಪ್ ಅವರೇ ಹೇಳಿದ್ದಾರೆ. ಚಿತ್ರ ನಟರು ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವುದು ಹೊಸದೇನಲ್ಲ ಎಂದರು.
ಅಥಣಿ ಕ್ಷೇತ್ರದ ಟಿಕೆಟ್‌ಗೆ ಹಾಲಿ ಶಾಸಕ ಮಹೇಶ್‌ಕುಮಟಹಳ್ಳಿ ಮತ್ತು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ್‌ಸವದಿ ನಡುವಿನ ಪೈಪೋಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಈ ಬಗ್ಗೆ ಕುಮಟಹಳ್ಳಿಯವರೊಂದಿಗೆ ಮಾತನಾಡಿದ್ದೇನೆ. ಅಂತಿಮವಾಗಿ ವರಿಷ್ಠರು ಯಾರು ಅಭ್ಯರ್ಥಿ ಎಂಬುದನ್ನು ತೀರ್ಮಾನಿಸುತ್ತಾರೆ ಎಂದರು.