ಬಿಜೆಪಿ ಮುಖಂಡರಿಗೆ ಜೀವ ಬೆದರಿಕೆ: ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ದೂರು

ಕಲಬುರಗಿ.ನ.17: ಬಿಜೆಪಿ ಮುಖಂಡರಿಗೆ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಗುರುವಾರ ಚಿತ್ತಾಪುರ ತಾಲ್ಲೂಕು ಬಿಜೆಪಿ ಅಧ್ಯಕ್ಷ ನೀಲಕಂಠ್ ಪಾಟೀಲ್ ಹಾಗೂ ಮುಖಂಡ ಮಣಿಕಂಠ್ ರಾಠೋಡ್ ಅವರು ವಾಡಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇತ್ತೀಚೆಗೆ ವಾಡಿ ಪುರಸಭೆಯ ವತಿಯಿಂದ ಜರುಗಿದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ವಿರುದ್ಧ ದ್ವೇಷದ ಹೇಳಿಕೆ ನೀಡಿದ್ದಾರೆ. ನಾವು ಮನಸ್ಸು ಮಾಡಿದರೆ ತಾಲ್ಲೂಕು ಮಾತ್ರವಲ್ಲ ಇಡೀ ಜಿಲ್ಲೆಯಲ್ಲಿ ಯಾವೊಬ್ಬ ಬಿಜೆಪಿ ಮುಖಂಡ ಓಡಾಡಲು ಬಇಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆಯವರು ಬಹಿರಂಗವಾಗಿಯೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಆದ್ದರಿಂದ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಜೀವ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರವಿಂದ್ ಚವ್ಹಾಣ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.