ಬಿಜೆಪಿ ಮುಖಂಡನ ಹತ್ಯೆ ಪ್ರತಿಧ್ವನಿ

ದಕ್ಷಿಣ ಕನ್ನಡ ಉದ್ವಿಗ್ನ, ಸಂಘ ಪರಿವಾರದಿಂದ ಬಂದ್ ಕರೆ ಬಸ್‌ಗಳ ಮೇಲೆ ಕಲ್ಲು ತೂರಾಟ
ದಕ್ಷಿಣ ಕನ್ನಡ,ಜು.೨೭-.ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಯಿಂದಾಗಿ ಜಿಲ್ಲೆಯಾದ್ಯಂತ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಘ ಪರಿವಾರ ದಕ್ಷಿಣ ಕನ್ನಡ ಜಿಲ್ಲೆ ಕರೆ ನೀಡಿದೆ. ಹತ್ಯೆ ಖಂಡಿಸಿ ಸಂಘ ಪರಿವಾರ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಪೊಲೀಸರ ಮದ್ಯ ಪ್ರವೇಶದಿಂದಾಗಿ ಮೆರವಣಿಗೆಯನ್ನು ರದ್ದು ಪಡಿಸಲಾಗಿದೆ. ಮೃತದೇಹವನ್ನು ನೇರವಾಗಿ ಬೆಳ್ಳಾರೆಯಲ್ಲಿರುವ ನಿವಾಸಕ್ಕೆ ಕೊಂಡೊಯ್ಯಲಾಯಿತು.
ಭದ್ರತೆಯ ನಡುವೆಯೂ ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ಪುತ್ತೂರಿನ ಬೊಳುವಾರಿನಲ್ಲಿ ಸರ್ಕಾರಿ ಬಸ್‌ವೊಂದರ ಕಲ್ಲು ತೂರಾಟ ನಡೆಸಲಾಗಿದೆ. ಮಂಗಳೂರಿಗೆ ಹೋಗುತ್ತಿದ್ದ ಬಸ್‌ಗೆ ಮೇಲೆ ಕೆಲ ಯುವಕರು ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ನಡುವೆ ನೆಟ್ಟಾರು ಕೊಲೆ ಖಂಡಿಸಿ ಜಿಲ್ಲೆಯ ಹಲವೆಡೆ ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ತಡೆಯಲಾಗಿದ್ದು, ಪೊಲೀಸರು ಗುಂಪು ಸೇರದಂತೆ ನಿಗಾ ವಹಿಸಿದ್ದಾರೆ.
ಕಡಬದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಶಾಲಾ -ಕಾಲೇಜುಗಳಿಗೆ ರಜೆ ನೀಡಲಾಗಿದ್ದರೆ,ಪುತ್ತೂರಿನ ವಿವೇಕಾನಂದ, ಅಂಬಿಕಾ ಶಿಕ್ಷಣ ಸಂಸ್ಥೆಗಳು ಸೇರಿ ಇತರ ಖಾಸಗಿ ಶಾಲೆಗಳು ರಜೆ ಘೋಷಿಸಿವೆ.
ಜಿಲ್ಲೆಯ ಸುಳ್ಳ, ಕಡಬ ಹಾಗು ಪುತ್ತೂರು ತಾಲುಕುಗಳಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು, ಉಡುಪಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಬೆಳ್ಳಾರೆಯಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿಯಿದ್ದು ಒಂದೇ ವಾರದ ಅವಧಿಯಲ್ಲಿ ಬೆಳ್ಳಾರೆಯಲ್ಲಿ ಎರಡು ಕೊಲೆ ನಡೆದಿದೆ. ಪ್ರವೀಣ್ ಹತ್ಯೆ ನಡೆದ ಸ್ಥಳವನ್ನು ಪೊಲೀಸರು ಕಾವಲು ಕಾಯುತ್ತಿದ್ದು, ವಿಧಿವಿಜ್ಞಾನ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವ ತನಕವೂ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಆಸ್ಪತ್ರೆ ಮುಂಭಾಗ ನೆರೆದಿದ್ದ ಸಂಬಂಧಿಕರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ತಡರಾತ್ರಿ ೧.೩೦ ರ ಸುಮಾರಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರು. ದುಷ್ಕೃತ್ಯ ಎಸಗಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಪೊಲೀಸ್ ಇಲಾಖೆ ತನಿಖೆಯಲ್ಲಿ ತೊಡಗಿದೆ.
ಜಿಲ್ಲಾಧಿಕಾರಿ ಮನವಿ:
ಮೃತರ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡಬೇಕೆಂಬ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿ ನೀಡಿದ ಭರವಸೆಯ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರಿನ ಪ್ರಗತಿ ಆಸ್ಪತ್ರೆಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ನಂತರ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಯಿತು. ಬೆಳ್ಳಾರೆಯ ನಿವಾಸ ಮುಂಭಾಗ ಪ್ರವೀಣ್ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಲಾಗಿದೆ.
ವಿಶೇಷ ತಂಡ ರಚನೆ: ನೆಟ್ಟಾರು ಭೀಕರ ಕೊಲೆ ಪ್ರಕರಣದ ಹಂತಕರ ಪತ್ತೆಗೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪಿಗಳಿಗಾಗಿ ಕೇರಳ ಗಡಿ ಪ್ರದೇಶ ಹಾಗೂ ಪುತ್ತೂರಿನ ಸುತ್ತಮುತ್ತ ನಾಕಾಬಂದಿ ಹಾಕಿ ವಾಹನಗಳನ್ನು ತಲಾಶ್ ಮಾಡಲಾಗುತ್ತಿದೆ.
ಪ್ರಕರಣದ ಹಿನ್ನೆಲೆ: ಬೆಳ್ಳಾರೆಯಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು(೩೬) ನಿನ್ನೆ ರಾತ್ರಿ ಅಂಗಡಿ ಮುಚ್ಚುವಾಗ ಏಕಾಏಕಿ ದಾಳಿ ನಡೆಸಿ ತಲ್ವಾರ್‌ನಿಂದ ಹಲ್ಲೆಮಾಡಲಾಗಿತ್ತು.
ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.ಕೇವಲ ಮೂರು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಪ್ರವೀಣ್ ಹಲವು ಹಿಂದುತ್ವಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.
ಪ್ರತಿಕಾರದ ಕೊಲೆ: ಕೆಲ ದಿನಗಳ ಹಿಂದಷ್ಟೇ ಬೆಳ್ಳಾರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಸರಗೋಡು ನಿವಾಸಿ ಮಸೂದ್ ಎಂಬಾತನ ಕೊಲೆಯಾಗಿತ್ತು. ಮಸೂದ್ ಮೇಲೆ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್, ಭಾಸ್ಕರ ಎನ್ನುವವರು ಹಲ್ಲೆ ಮಾಡಿದ್ದರು. ಜುಲೈ ೧೯ರಂದು ಸುಧೀರ್ ಎಂಬಾತನಿಗೆ ಮಸೂದ್ ಕೈ ತಾಗಿದ ಕಾರಣ ಉಂಟಾದ ಗಲಾಟೆ ಮಸೂದ್ ಸಾವಿನಲ್ಲಿ ಪರ್ಯಾಸನಗೊಂಡಿತ್ತು.
ಬಾಟಲಿಯಿಂದ ತಲೆಗೆ ಏಟು ಬಿದ್ದಿದ್ದ ಮಸೂದ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಈ ಸಾವಿಗೆ ಪ್ರತೀಕಾರವಾಗಿ ಬಿಜೆಪಿ ಮುಖಂಡನ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಶಾಂತಿ-ಸುವ್ಯವಸ್ಥೆ ಕಾಪಾಡಲು ಡಿಸಿ ಮನವಿ
ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಹಿನ್ನೆಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಭೇಟಿ ನೀಡಿದ್ದಾರೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಪ್ರವೀಣ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಈ ವೇಳೆ ಪುತ್ತೂರು ಆಸ್ಪತ್ರೆಗೆ ಮುಂದೆ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟುಹಿಡಿದರು. ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಆಗಮಿಸಿದ ಜಿಲ್ಲಾಧಿಕಾರಿ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದು, ಮೃತ ಯುವಕನ ಕುಟುಂಬಕ್ಕೆ ಪರಿಹಾರ ನೀಡುವ ಕೋರಿಕೆಯನ್ನು ಪ್ರಾಮಾಣಿಕವಾಗಿ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ. ಪೊಲೀಸರು ಸೂಕ್ತ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಿದ್ದು, ಹಾಗೂ ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್ ವರದಿ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಸರ್ಕಾರ ಗಂಭೀರವಾಗಿ ಪರಿಗಣಿಸಿದೆ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ರಾಜ್ಯ ಗೃಹಸಚಿವರ ಜತೆ ಚರ್ಚೆ ನಡೆಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ. ಬಿಜೆಪಿ ಪಕ್ಷದ ಯುವ ಮುಖಂಡ, ಅಮಾಯಕ ಪ್ರವೀಣ್ ಬೆಳ್ಳಾರೆ ಮೇಲೆ ದಾಳಿ, ಕೊಲೆ ಕೃತ್ಯ ಖಂಡನೀಯ. ಇದನ್ನು ನೋಡಿ ಸರಕಾರ ಸುಮ್ಮನಿರಲು ಸಾಧ್ಯವಿಲ್ಲ. ಘಟನೆ ಬಗ್ಗೆ ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ, ಗೃಹ ಸಚಿವರಿಗೆ ವರದಿ ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಶೀಘ್ರ ತಂಡ ರಚಿಸಿ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ದುಷ್ಕರ್ಮಿಗಳ ಮಟ್ಟಹಾಕುವ ಕೆಲಸವನ್ನು ಸರಕಾರ ಪ್ರಾಮಾಣಿಕವಾಗಿ ಮಾಡಲಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ. ಪ್ರವೀಣ್ ಹತ್ಯೆ ವಿಚಾರದಲ್ಲಿ ಯಾರೂ ಉದ್ವೇಗಕ್ಕೊಳಗಾಗುವುದು ಬೇಡ. ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಶಾಂತಿ ಪ್ರಿಯರು. ಕೊಲೆ ವಿಚಾರದಲ್ಲಿ ಆರೋಪಿಗಳ ಮಟ್ಟಹಾಕುವ ಪ್ರಯತ್ನ ಶೀಘ್ರದಲ್ಲೇ ಆಗಲಿದೆ ತಿಳಿಸಿದ್ದಾರೆ.