ಬಿಜೆಪಿ ಮುಖಂಡನಿಗೆ ಮುನಿಯಪ್ಪ ಆಹ್ವಾನ-ಚರ್ಚೆಗೆ ಗ್ರಾಸ

ಶಿಡ್ಲಘಟ್ಟ, ಜು.೨೨: ಕೇಂದ್ರದ ಮಾಜಿ ಸಚಿವ, ಕೋಲಾರ ಸಂಸತ್ ಕ್ಷೇತ್ರದ ಕಾಂಗ್ರೆಸ್‌ನ ಪ್ರಭಾವಿ ನಾಯಕರೂ ಆಗಿರುವ ಕೆ.ಎಚ್.ಮುನಿಯಪ್ಪ ಅವರು ತಮ್ಮ ಹುಟ್ಟೂರು ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿ ನಡೆದ ಊರ ಜಾತ್ರೆಗೆ ಬಿಜೆಪಿಯ ಪ್ರಭಾವಿ ಮುಖಂಡರನ್ನು ಊಟಕ್ಕೆ ಆಹ್ವಾನಿಸಿದ್ದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಡಲೆಂದೆ ಕೆಎಚ್‌ಎಂ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ತಮ್ಮ ಮನೆಗೆ ಊರ ಜಾತ್ರೆಯ ಊಟದ ನೆಪದಲ್ಲಿ ತಮ್ಮ ಮನೆಗೆ ಆಹ್ವಾನಿಸಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.
ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ವರ್ಚಸ್ಸು ಶಕ್ತಿ ಹೊಂದಿರುವ ಕೆಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕಳೆದ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲೆ ಊರ ಜಾತ್ರೆಯ ನೆಪದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನಂ, ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರನ್ನು ತಮ್ಮ ಮನೆಗೆ ಊಟಕ್ಕಾಗಿ ಆಹ್ವಾನಿಸಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ಇದು ಊರ ಜಾತ್ರೆ, ನಮ್ಮ ಮನೆಗೆ ಊಟಕ್ಕಾಗಿ ಆತ್ಮೀಯವಾಗಿ ಪಕ್ಷಾತೀತವಾಗಿ ಎಲ್ಲರನ್ನೂ ಆಹ್ವಾನಿಸಿದ್ದೇನೆ ಎಂದು ಕೆ.ಎಚ್.ಮುನಿಯಪ್ಪ ಹೇಳುತ್ತಿದ್ದಾರೆಯಾದರೂ ಸ್ಥಳೀಯ ಶಾಸಕ ವಿ.ಮುನಿಯಪ್ಪ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಯಾರೂ ಕಾಣಲಿಲ್ಲ
ಸಚಿವ ಡಾ.ಕೆ.ಸುಧಾಕರ್ ಹಾಗೂ ಅವರ ಬೆಂಬಲಿಗರು, ಕೆ.ಎಚ್.ಮುನಿಯಪ್ಪ ಅವರ ಬಣದಲ್ಲಿ ಗುರ್ತಿಸಿಕೊಂಡ ಕಾಂಗ್ರೆಸ್ ಮುಖಂಡರಷ್ಟೆ ಕಾಣಿಸಿಕೊಂಡಿದ್ದು ಸಂಜೆಗೆ ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಮುನಿರತ್ನಂ ಅವರೂ ಸಹ ಬರುತ್ತಾರೆ ಎನ್ನಲಾಗಿದೆ.