ಬಿಜೆಪಿ ಮಹಿಳಾ ಮೋರ್ಚಾದಿಂದ ಸುಕನ್ಯಾ ಸಮೃದ್ಧಿ ಯೋಜನೆಯ ನೆರವು

ಬಳ್ಳಾರಿ, ಜ.10: ಭಾರತೀಯ ಜನತಾ ಪಾರ್ಟಿಯ ನಗರದ ಮಹಿಳಾ ಮೋರ್ಚಾದಿಂದ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ನೆರವನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಅದರಲ್ಲಿ ಮಹತ್ವದ್ದು ಈ ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯಡಿ ಹೆಣ್ಣು ಮಗುವಿಗೆ ಇಂತಿಷ್ಟು ಎಂದು 11 ವರ್ಷಗಳ ಕಾಲ ಹಣ ಪಾವತಿಸಿದರೆ, ಆ ಬಾಲಕಿ 18 ವರ್ಷಗಳಾದಾಗ ಆಕೆಯ ವಿದ್ಯಾಭ್ಯಾಸ, ವಿವಾಹ ಮೊದಲಾದವುಗಳಿಗೆ ನೆರವಿಗೆ ಬರುವ ರೀತಿ ರೂಪಿಸಿದೆ.
ಅತಿ ಕಡುಬಡ ಕುಟುಂಬದ ಹೆಣ್ಣು ಮಕ್ಕಳನ್ನು ಗುರುತಿಸಿ ಈ ಯೋಜನೆಯ ಲಾಭ ದೊರಕಿಸುವಂತೆ ಮಾಡಲು ಬಿಜೆಪಿ ಮಹಿಳಾ ಮೋರ್ಚಾ 60 ಮಕ್ಕಳನ್ನು ಗುರುತಿಸಿ ಅವರ ಹೆಸರಲ್ಲಿ ಖಾತೆ ತೆರೆದು ತಲಾ ಒಂದು ಸಾವಿರ ರೂಗಳ ವರ್ಷಕ್ಕೆ ಪಾವತಿಸಲು ನಿರ್ಧರಿಸಿದೆ. ಅಲ್ಲದೆ 11ವರ್ಷಗಳ ಕಾಲವೂ ಈ ಖಾತೆಗೆ ಹಣ ತುಂಬಲಿದೆ.
ಈ ರೀತಿ ಆರಂಭಿಸಿದ ಖಾತೆಗಳ ಫಲಾನುಭವಿಗಳಿಗೆ ಇಂದು ನಗರದ ಕಪ್ಪಗಲ್ಲು ರಸ್ತೆಯ ಬ್ರಹ್ಮಯ್ಯ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಮಹಿಳಾ ಮೋರ್ಚಾದ ಸಮಾರಂಭದಲ್ಲಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಪಾಸ್ ಬುಕ್ ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ಕುಟುಂಬವು ತನ್ನ ಮನೆಯ ಹೆಣ್ಣು ಮಗುವಿಗೆ ಈ ಸುಕನ್ಯಾ ಸಮೃದ್ಧಿ ಯೋಜನೆಯಡಿ ನೊಂದಾಯಿಸಬೇಕು, ಯಾವ ಬಡ ಕುಟುಂಬಕ್ಕೆ ಈ ಖಾತೆ ತೆರೆಯಲು ಆಗುವುದಿಲ್ಲವೆಂದು ತನ್ನ ಗಮನಕ್ಕೆ ತಂದರೆ ಆದಕ್ಕೆ ಸಹಕಾರ ನೀಡುವುದಾಗಿ ಹೇಳಿ ಇಂದಿನ ಮಹಿಳಾ ಮೋರ್ಚಾದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಸಮಾರಂಭದ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಪಕ್ಷದ ಮುಖಂಡರುಗಳಾದ ಕೆ.ಎ.ರಾಮಲಿಂಗಪ್ಪ, ಡಾ.ಎಸ್.ಜೆ.ವಿ.ಮಹಿಪಾಲ್, ಶಶಿಕಲಾ, ಕೃಷ್ಣಮೋಹನ್, ವಿಜಯಲಕ್ಷ್ಮಿ, ಸುಗುಣ, ಜ್ಯೋತಿ ಪ್ರಕಾಶ್, ಪುಷ್ಪಾ, ಪದ್ಮಾವತಿ, ಕೆ.ಬಿ.ವೆಂಕಟೇಶ್, ಕೆ.ಎಸ್.ಅಶೋಕ್ ಕುಮಾರ್, ಶ್ರೀನಿವಾಸ ಮೋತ್ಕರ್, ವೀರಶೇಖರರೆಡ್ಡಿ, ಗಾಲಿ ಶ್ರವಣಕುಮಾರ ರೆಡ್ಡಿ ಮೊದಲಾದವರು ಇದ್ದರು.