ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ-ಬಿ.ವೈ.ರಾಘವೇಂದ್ರ

ಕೋಲಾರ,ಏ,೨-ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಭಾರತೀಯ ಜನತಾ ಪಕ್ಷದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ೧೫೦ ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದ ಹೊರವಲಯದ ರತ್ನಾ ಕನ್ವೇಕ್ಷಷನ್ ಹಾಲ್‌ನಲ್ಲಿ ಜಿಲ್ಲೆಯ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಲು ತೀರ್ಮಾನಿಸಿದೆ. ಜಿಲ್ಲೆ ಹಿಂದುಳಿದಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದ್ದಾರೆ. ಬಿಜೆಪಿ ಮತ್ತು ಮುಂಬರುವ ಬಿಜೆಪಿ ಸರ್ಕಾರ ಜಿಲ್ಲೆಗೆ ದೊಡ್ಡ ಮಟ್ಟದ ಕೊಡುಗೆ ನೀಡಲಿದೆ ಎಂದು ಹೇಳಿದರು.
ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಕಂಡುಬರುತ್ತಿದ್ದು, ಕಾಂಗ್ರೆಸ್ ಶಾಸಕರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ಅಭಿವೃದ್ಧಿ ಕಡೆಗಣಿಸಿ ಸ್ವಹಿತಕ್ಕಾಗಿ ಶಾಸಕ ಸ್ಥಾನ ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗಾಗಿಯೇ ಎಲ್ಲ ಕಡೆ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವಿದೆ. ಜೆಡಿಎಸ್, ಕಾಂಗ್ರೆಸ್ ಪೈಪೋಟಿ ನೀಡಲಿವೆಯಾದರೂ, ಜನರು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ತೀರ್ಮಾನಿಸಿರುವುದರಿಂದ ಆರೂ ಕ್ಷೇತ್ರಗಳಲ್ಲಿ ಪ್ರಬಲವಾಗಿ ಪೈಪೋಟಿ ನೀಡಲು ಸಜ್ಜಾಗಿದ್ದೇವೆ ಎಂದರು.
ದೇಶದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಜನರಿಂದ ಮರೆಯಾಗುತ್ತಿರುವ ಪಕ್ಷವಾಗಿದೆ. ಜನರ ಮಧ್ಯೆ ನೆನಪಿಗೋಸ್ಕರ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರು ರಾಹುಲ್ ಗಾಂಧಿಯಷ್ಟೇ ಅಲ್ಲ, ಯಾರನ್ನು ಕರೆಸಿ ಸಭೆ, ಸಮಾರಂಭ ಮಾಡಿಸಿದರೂ, ಜನ ಮತ ಹಾಕುವುದಿಲ್ಲ ಎಂದು ಹೇಳಿದರು.

ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದೆ, ಈಗ ನನಗೆ ವಹಿಸಿರುವ ಕೆಲಸಕ್ಕೆ ಬದ್ಧನಾಗಿರುತ್ತೆನೆ. ಶಿಕಾರಿಪುರ ಯಡಿಯೂರಪ್ಪರಿಗೆ ಭವಿಷ್ಯಕೊಟ್ಟ ಕ್ಷೇತ್ರ. ನಾನು ಮೂರು ಬಾರಿ ಸಂಸದನಾಗಲು ಶಿವಮೊಗ್ಗ ಜನ ಆಶೀರ್ವಾದಿಸಿದ್ದಾರೆ. ಯುವ ಮುಖಂಡ ಬಿ.ವೈ.ವಿಜಯೇಂದ್ರ ಎಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವ ವಿಶ್ವಾಸವಿದೆ.
-ಬಿ.ವೈ.ರಾಘವೇಂದ್ರ, ಸಂಸದ.