
ಬೆಂಗಳೂರು,ಜು.೧೨:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದು, ಜು. ೧೭ ಮತ್ತು ೧೮ ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ೨೪ ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಬಿಹಾರ ರಾಜಧಾನಿ ಪಾಟ್ನಾದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದಲ್ಲಿ ಸಭೆ ಸೇರಿ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಿತ್ತು. ಈ ಸಭೆ ಅಪೂರ್ಣಗೊಂಡಿದ್ದು, ಈಗ ಬೆಂಗಳೂರಿನಲ್ಲಿ ೨ನೇ ಸಭೆ ನಡೆಸಲು ವೇದಿಕೆ ಸಿದ್ಧಗೊಂಡಿದೆ.
ಈ ಪ್ರತಿಪಕ್ಷಗಳ ಮಹಾಮೈತ್ರಿಗೆ ಇನ್ನೂ ೮ ಹೊಸ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಗೆ ಇನ್ನೂ ೧೦ ತಿಂಗಳು ಬಾಕಿ ಉಳಿದಿವೆ. ಈಗಿನಿಂದಲೇ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳು ತಂತ್ರಗಾರಿಕೆ ರೂಪಿಸಲು ಮುಂದಾಗಿವೆ.
ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಆರ್‌ಎಸ್‌ಪಿ, ಇಂಡಿಯನ್ ಮುಸ್ಲಿಂಲೀಗ್, ಕೇರಳ ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಬೆಂಬಲ ವ್ಯಕ್ತಪಡಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದೆ.
ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷಗಳಿಗೆ ಆಹ್ವಾನ ನೀಡಿ ಬೆಂಗಳೂರಿನಲ್ಲಿ ನಡೆಯಲಿರುವ ಸಭೆಗೆ ಹಾಜರಾಗಿ ಒಗ್ಗಟ್ಟು ಪ್ರದರ್ಶಿಸುವಂತೆ ಕರೆ ಕೊಟ್ಟಿದ್ದಾರೆ.
ಬಿಹಾರದಲ್ಲಿ ನಡೆದ ಮೊದಲ ಸಭೆ ಅತ್ಯಂತ ಯಶಸ್ವಿಯಾಗಿದ್ದು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೇಂದ್ರ ಸರ್ಕಾರದಿಂದ ಧಕ್ಕೆ ಇದೆ. ಹೀಗಾಗಿ, ಬಿಜೆಪಿ ವಿರುದ್ಧ ಹೋರಾಡಲು ಅವಿರೋಧವಾಗಿ ಒಗ್ಗಟ್ಟಿನಿಂದ ಒಪ್ಪಂದಕ್ಕೆ ಬರಬೇಕಾಗಿದೆ.
ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಹುದಾಗಿದೆ ಎಂದು ಹೇಳಿದರು.
ಈ ಎಲ್ಲ ವಿದ್ಯಮಾನಗಳ ನಡುವೆ ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ವಿಪಕ್ಷಗಳ ಸಭೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದಲೇ ಬಿಜೆಪಿ ವಿರುದ್ಧ ರಣನೀತಿ ರೂಪಿಸಲು ವಿಪಕ್ಷಗಳು ಸಜ್ಜಾಗಿವೆ.