ಬಿಜೆಪಿ ಮಡಿಲಿಗೆ ಬ್ಯಾಡಗಿ ಪುರಸಭೆ

ಬ್ಯಾಡಗಿ, ನ 7- ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಕವಿತಾ ಸೊಪ್ಪಿನಮಠ ಹಾಗೂ ಉಪಾಧ್ಯಕ್ಷರಾಗಿ ಕಲಾವತಿ ಬಡಿಗೇರ ಅವಿರೋಧವಾಗಿ ಆಯ್ಕೆಯಾಗಿದ್ದು, ಬಿಜೆಪಿ ತೆಕ್ಕೆಗೆ ಪುರಸಭೆಯ ಆಡಳಿತ ಸೇರಿದಂತಾಗಿದೆ.
ಶುಕ್ರವಾರ ಪುರಸಭೆಯ ಸಭಾಭವನದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಕವಿತಾ ಸೊಪ್ಪಿನಮಠ ಹಾಗೂ ಹಿಂದುಳಿದ “ಅ” ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಕಲಾವತಿ ಬಡಿಗೇರ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ ರವಿಕುಮಾರ ಕೊರವರ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಪುರಸಭೆ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿ ನಿಶ್ಚಿತ ಬಹುಮತ ಹೊಂದಿದ್ದ ಬಿಜೆಪಿಗೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ನಾಲ್ವರು ಸದಸ್ಯರು ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಅದರ ಬಲ 17ಕ್ಕೇರಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ನಿಶ್ಚಿತವಾಗಿತ್ತು. ಈ ಕಾರಣದಿಂದ ಕೇವಲ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೇಸ್ ಪಕ್ಷ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವ ಗೋಜಿಗೆ ಹೋಗದೆ ತಟಸ್ಥವಾಗಿ ಉಳಿಯುವಂತಾಗಿತ್ತು.
ಪುರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಂಸದ ಶಿವಕುಮಾರ ಉದಾಸಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ತಾಲೂಕಾ ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಮುಖಂಡರಾದ ವಿ.ವಿ. ಹಿರೇಮಠ, ಎಸ್.ಎನ್. ಮಾತನವರ, ವೀರೇಂದ್ರ ಶೆಟ್ಟರ, ಸುರೇಶ ಯತ್ನಳ್ಳಿ, ರಾಮಣ್ಣ ಉಕ್ಕುಂದ, ಸುರೇಶ ಉದ್ಯೋಗಣ್ಣನವರ ಸೇರಿದಂತೆ ಪುರಸಭೆಯ ಸದಸ್ಯರು ಹಾಗೂ ಇನ್ನಿತರರು ಅಭಿನಂದಿಸಿದರು.
ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಎಲ್ಲರಿಗೂ ಸಿಹಿಯನ್ನು ಹಂಚಿದರು.