
ಬೆಂಗಳೂರು, ಮೇ ೨೧- ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸತ್ಯ. ಈ ಬಗ್ಗೆ ತನಿಖೆಯಾಗಬೇಕು ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆದಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗ ರಚನೆಯಾಗಬೇಕು ಎಂದು ಅವರು ಹೇಳಿದರು.
ಸಿದ್ದರಾಮಯ್ಯನವರನ್ನು ನಾನು ಇಂದು ಭೇಟಿ ಮಾಡಿದ್ದೇನೆ. ವೈಯುಕ್ತಿಕ ವಿಚಾರಗಳನ್ನು ಚರ್ಚೆ ಮಾಡಿಲ್ಲ. ನನಗೂ ಸಚಿವನಾಗಬೇಕು ಎಂಬ ಆಸೆ ಇದೆ. ಸಚಿವನಾದರೆ ಹೆಚ್ಚು ಸೇವೆ ಮಾಡಬಹುದು. ಇನ್ನು ೨೪ ಮಂದಿಯನ್ನು ಸಚಿವರನ್ನಾಗಿಸಲು ಅವಕಾಶ ಇದೆ. ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ ಎಂದರು.