
ದಾವಣಗೆರೆ.ಮಾ.೧೦: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದರೂ ಸಹ ನಿಸ್ಸಹಾಯಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತು.ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಬಹಿರಂಗವಾಗಿ ಭ್ರಷ್ಟಾಚಾರ ನಡೆದಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಮುಖ್ಯಮಂತ್ರಿ ಬಸವರಾಜ್ ಸುಮ್ಮನಿದ್ದಾರೆ. ಇದನ್ನು ಗಮನಿಸಿದರೆ ಮುಖ್ಯ ಮಂತ್ರಿಗಳಿಗೂ ಭ್ರಷ್ಟಾಚಾರದಲ್ಲಿ ಪಾಲಿದೆ ಎನ್ನುವ ಅನುಮಾನ ಮೂಡುತ್ತದೆ ಎಂದು ಕಿಡಿಕಾರಿದರು.ಇದೇ ವೇಳೆ ಮಾತನಾಡಿದ ಕೆ ಟಿ ಕಲ್ಲೇಶ್, ರಾಜ್ಯದಲ್ಲಿ ಬಡತನದಿಂದ ಜನರು ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಪ್ರತಿಯೊಂದು ಕೆಲಸಕ್ಕೂ ಕಮಿಷನ್ ಪಡೆಯುತ್ತಾ ರಾಜ್ಯದ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದೆ ಜನಸಾಮಾನ್ಯರ ಕಷ್ಟಗಳನ್ನು ಹೆಚ್ಚು ಮಾಡಿ ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ.ಈ ನಿಟ್ಟಿನಲ್ಲಿ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾಧ್ಯಕ್ಷರ ಚಂದ್ರಶೇಖರ್ ಬಸಂತಪ್ಪ ಮಾತನಾಡಿ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಿತಿಮೀರಿದ ಭ್ರಷ್ಟಾಚಾರದಲ್ಲಿ ತೊಡಗಿದೆ. ಬಹಿರಂಗವಾಗಿ ಹಣ ಸಿಕ್ಕರೂ ಸಹ ಮುಖ್ಯಮಂತ್ರಿ ಯಾವುದೇ ಕ್ರಮವನ್ನು ಶಾಸಕರ ಮೇಲೆ ಕೈಗೊಳ್ಳುತ್ತಿಲ್ಲ ಇದಲ್ಲದೆ ಆರೋಪಿ ಸ್ಥಾನದಲ್ಲಿರುವ ಮಾಡಾಳು ವಿರೂಪಾಕ್ಷಪ್ಪ ಭ್ರಷ್ಟಾಚಾರ ಕೆಲಸದಲ್ಲಿ ಜೈಲು ಪಾಲ ಬೇಕಾಗಬೇಕಿದ್ದರೂ ಸಹ ಸರ್ಕಾರದ ಸಹಾಯದಿಂದ ತಪ್ಪಿಸಿಕೊಂಡು ಓಡಾಡಿ ಇದೀಗ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಈ ರೀತಿ ಹೊರಗೆ ಬಂದರೆ ಸಾಕ್ಷಿಗಳ ನಾಶಪಡಿಸಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶ್ರೀಧರ ಪಾಟೀಲ್ ಮಾತನಾಡಿ, ವಿರುಪಾಕ್ಷಪ್ಪ ಅವರ ಪುತ್ರನ ಕಚೇರಿಯಲ್ಲಿ ಕೆ ಎಸ್ ಅಂಡ್ ಡಿ ಎಲ್ ಸಂಸ್ಥೆಯಲ್ಲಿ ರಾಸಾಯನಿಕ ಸರಬರಾಜು ಒಪ್ಪಂದದಲ್ಲಿ ಹಣ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದರೂ ಸಹ ಯಾರು ಸಹ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಅದಲ್ಲದೆ ರಾಜ್ಯದ ಗುತ್ತಿಗೆದಾರರ ಸಂಘವು ಮೊದಲಿಂದಲೂ ಆರೋಪ ಮಾಡುತ್ತಿದ್ದರೂ ಬಿಜೆಪಿ ಪಕ್ಷ ಕ್ರಮಕ್ಕೆ ಮುಂದಾಗಿಲ್ಲ. ಅಲ್ಲದೆ ಬಿಜೆಪಿ ತನಗೆ ಸಿಕ್ಕಿರುವ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ನಾಚಿಕೆಗೇಡು ಎಂದು ಹೇಳಿದರು.ಈ ವೇಳೆ ಆದಿಲ್ ಖಾನ್, ಸಿದ್ದಪ್ಪ, ಕೆ.ರವೀಂದ್ರ, ಗಣೇಶ್ ದುರ್ಗದ, ಬಸವರಾಜ್, ಆಯೇಷಾ, ಹಾಲಸ್ವಾಮಿ, ಶಬ್ಬೀರ್, ಸುರೇಶ್, ಸಮೀರ್, ರೋಹಿತ್ ಇತರರು ಇದ್ದರು.