ಬಿಜೆಪಿ ಭ್ರಷ್ಟಾಚಾರ ಆರೋಪಕ್ಕೆ ಪ್ರಿಯಾಂಕ್ ಆಕ್ಷೇಪ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಆ. ೧೦- ಯಾವುದೇ ಕಾಮಗಾರಿಗಳ ಪರಿಶೀಲನೆ ಮಾಡಿ ಬಿಲ್ ಪಾವತಿಯಾಗುತ್ತದೆ. ಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘಧ ಅಧ್ಯಕ್ಷ ಕೆಂಪಣ್ಣ ಅವರೇ ಇಂದು ನಾವು ಭ್ರಷ್ಟಾಚಾರ ಆರೋಪ ಮಾಡುತ್ತಿಲ್ಲ. ಬಿಲ್ ಪಾವತಿ ವಿಳಂಬವಾಗುತ್ತಿದೆ ಅಷ್ಟೇ ನಮ್ಮ ಆರೋಪ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಭ್ರಷ್ಟಾಚಾರದ ಆರೋಪವನ್ನು ಬಿಜೆಪಿಯವರು ಮಾಡುತ್ತಿರುವುದು ಸರಿಯಲ್ಲ ಎಂದರು.ಬಿಜೆಪಿ ಚುನಾವಣಾ ಸಂದರ್ಭದಲ್ಲಿ ಟೆಂಡರ್ ಕರೆದು ಕಾಮಗಾರಿಗಳನ್ನು ಕೊಟ್ಟಿದೆ. ಕಾಮಗಾರಿಗಳನ್ನು ವಹಿಸಿಕೊಟ್ಟ ಅಧಿಕಾರಿಗಳು ಇನ್ನೂ ಇದ್ದಾರೆ. ಹಳೆ ಡೆಟ್‌ಗಳಿಗೆ ಬಿಲ್‌ಗಳನ್ನು ಮಾಡಲಾಗಿದೆ. ಇದು ನಮ್ಮ ಇಲಾಖೆಯಲ್ಲೂ ನಡೆದಿದೆ. ನಾನು ಅದನ್ನು ನಿಲ್ಲಿಸಿದ್ದೇನೆ. ಕಾಮಗಾರಿಗಳ ಪರಿಶೀಲನೆ ಮಾಡಿ ಬಿಲ್‌ಗಳನ್ನು ಪಾವತಿ ಮಾಡುತ್ತೇವೆ ಎಂದರು.ಬಿಬಿಎಂಪಿ ವ್ಯಾಪ್ತಿಯಲ್ಲೂ ಉಪಮುಖ್ಯಮಂತ್ರಿಗಳು ಸಹಕಾರ ಕೊಡಿ ಎಂದು ಕೇಳಿದ್ದಾರೆ. ಸಹನೆಯಿಂದ ಇರಿ ಎಲ್ಲರಿಗೂ ಬಿಲ್ ಪಾವತಿಯಾಗುತ್ತದೆ. ಅದಕ್ಕೂ ಮೊದಲು ಕಾಮಗಾರಿಗಳ ಪರಿಶೀಲನೆ ಆಗಬೇಕು ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನು. ಇದನ್ನೇ ಇಟ್ಟುಕೊಂಡು ಭ್ರಷ್ಟಾಚಾರ ಆರೋಪ ಮಾಡುವುದು ಸರಿಯಲ್ಲ. ಕಾನೂನು ಪ್ರಕಾರ ಬಿಲ್ ಪಾವತಿಯಾಗುತ್ತದೆ ಎಂದರು.ಗುಲ್ಬರ್ಗಾದ ಚಿಂಚೋಳಿಯಲ್ಲಿ ೫೫ ಬಾರಿ ಒಂದೇ ಕಾಮಗಾರಿಗೆ ಬಿಲ್ ಮಾಡಿದ್ದಾರೆ. ಇದನ್ನು ಪಾವತಿಸಬೇಕು. ಕಾಮಗಾರಿ ಪರಿಶೀಲನೆ ಮಾಡುವುದು ಬೇಡವಾ ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.ಬಿಜೆಪಿಯವರು ಜನರ ಹಿತಾಸಕ್ತಿ ಕಾಪಾಡಲು ಸಹಕಾರ ಕೊಡಬೇಕು. ಮೊದಲು ವಿಪಕ್ಷ ನಾಯಕರನ್ನು ಮಾಡಿಕೊಂಡ ಆಮೇಲೆ ಬಿಜೆಪಿಯವರು ಪ್ರಶ್ನೆ ಮಾಡಲಿ. ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳದೆ ಮಾತನಾಡುವುದು ಬೇಡ. ೧೧ ಆಟಗಾರರನ್ನು ಬಿಟ್ಟು ೧೨ನೇ ಆಟಗಾರನನ್ನು ಕ್ಯಾಪ್ಟನ್ ಮಾಡುತ್ತಿದ್ದಾರೆ. ಇದರಿಂದ ನಿಮ್ಮ ಪಕ್ಷಕ್ಕೆ ಹಾನಿ ಎಂದು ಬಿಜೆಪಿ ನಾಯಕರುನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.ಪರಿಶಿಷ್ಟ ಜಾತಿ ವರ್ಗದ ಕಲ್ಯಾಣಕ್ಕೆ ಮೀಸಲಾಗಿರುವ ಎಸ್‌ಇಪಿ, ಟಿಎಸ್ಪಿ ಹಣ ದುರ್ಬಳಕೆ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ, ಜೆಡಿಎಸ್ ಮತ್ತು ಬಿಜೆಪಿಯವರು ಎಸ್‌ಇಪಿ, ಟಿಎಸ್‌ಪಿ ಕಾಯ್ದೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮೊದಲು ಅವರು ಕಾಯ್ದೆ ಬಗ್ಗೆ ತಿಳಿದುಕೊಳ್ಳಲಿ ಎಂದು ಅವರು ಹೇಳಿದರು.ಬಿಜೆಪಿಯವರೇ ಈ ಹಿಂದೆ ಎಸ್‌ಇಪಿ, ಟಿಎಸ್‌ಪಿಯ ೧೦ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿದ್ದರು. ನಾವು ಕಾನೂನು ಪ್ರಕಾರವೇ ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.