
ಬೆಂಗಳೂರು,ಮಾ.೩:ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂಬುದಕ್ಕೆ ಶಾಸಕ ಮಾಡಾಳ್ ಪುತ್ರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವುದೇ ಸಾಕ್ಷಿ. ಇದಕ್ಕಿಂತ ಯಾವ ದಾಖಲೆ ಬೇಕು ಎಂದು ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಪ್ರಿಯಾಂಕ್‌ಖರ್ಗೆ ತಿಳಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬಹಳ ದೊಡ್ಡ ಮಟ್ಟದಲ್ಲಿ ಬಿಜೆಪಿ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸಾರ್ವಜನಿಕ ವಲಯದಲ್ಲಿ ಇದು ಭ್ರಷ್ಟ ಸರ್ಕಾರ ಎಂಬ ಮಾತು ಕೇಳಿ ಬರುತ್ತಿದೆ. ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಯವರು ಈಗ ಏನು ಹೇಳುತ್ತಾರೆ. ಈಗ ಆಗಿರುವ ಬೆಳವಣಿಗೆ ನೋಡಿದರೆ ಅಮಿತ್ ಶಾ, ಭ್ರಷ್ಟಾಚಾರರಹಿತ ಸರ್ಕಾರ ಕೊಡುತ್ತೇವೆ ಎಂದು ಏಕೆ ಹೇಳಿದರು ಎಂಬುದು ಈಗ ಅರ್ಥವಾಗುತ್ತಿದೆ ಎಂದರು.
ಗೃಹ ಸಚಿವರು ನಾನು ದುರ್ಬಲ ಎನ್ನುತ್ತಾರೆ. ಹಾಗಾದರೆ ಶಾಸಕರನ್ನು ಬಂಧಿಸಲಿ ಎಂದು ಸವಾಲು ಹಾಕಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿರವರು ಪ್ರಾಮಾಣಿಕರೆನ್ನುತ್ತಾರೆ. ಈಗ ಅವರು ರಾಜೀನಾಮೆ ಕೊಡುವ ಕಾಲ ಬಂದಿದೆ. ಧೈರ್ಯವಿದ್ದರೆ ಮುಖ್ಯಮಂತ್ರಿಗಳು, ಮಂತ್ರಿಗಳು ರಾಜೀನಾಮೆ ಕೊಟ್ಟು ಚುನಾವಣೆಗೆ ಬರಲಿ ಜನ ತೀರ್ಮಾನ ಮಾಡುತ್ತಾರೆ ಎಂದರು.
ಕಳೆದ ೬ ತಿಂಗಳಲ್ಲಿ ಮಾಡಿರುವ ಟೆಂಡರ್‌ಗಳನ್ನು ನಿಲ್ಲಿಸಲಿ. ಈ ಟೆಂಡರ್‌ಗಳಿಂದಲೇ ಚುನಾವಣೆಗೆ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು.