ಬಿಜೆಪಿ-ಭ್ರಷ್ಟಚಾರ ನಾಣ್ಯದ ಎರಡು ಮುಖ

ಕೋಲಾರ, ಏ. ೧೭- ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಿತ್ಯ ವಸೂಲಿ, ಸುಲಿಗೆಯಲ್ಲಿ ತೊಡಗಿದೆ. ಶೇ ೪೦ ಕಮಿಷನ್ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ ಅಧಿಕಾರ ಕೈಗೆ ಸಿಕ್ಕರೆ ಬಿಜೆಪಿಯದ್ದು ರಾಕ್ಷಸ ಪ್ರವೃತ್ತಿಯಾಗಿದೆ. ಬಿಜೆಪಿ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು ಮಾಜಿ ಸಚಿವ ಹಾಗೂ ಶಾಸಕ ಸಿ.ಬಿ.ಕೃಷ್ಣಬೈರೇಗೌಡ ಟೀಕಿಸಿದರು.
ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಬಳಿ ಕಾಂಗ್ರೆಸ್ ಪಕ್ಷದಿಂದ ಜೈ ಭಾರತ್ ಸಮಾವೇಶದಲ್ಲಿ ಅವರು ಮಾತನಾಡಿ, ಇನ್ನೊಂದು ಕಡೆ ಶೇ.೬೦ ಬೆಲೆ ಏರಿಕೆಯಾಗಿದ್ದು ಜನರು ಒದ್ದಾಡುತ್ತಿದ್ದಾರೆ ಎಂದರು.
ದೇಶದ ಸಂಪತ್ತು ಆದಾನಿ ಕೈಯಲ್ಲಿದೆ. ಇದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ಅವರಿಗೆ ಶಿಕ್ಷೆಯಾಗುತ್ತದೆ. ದೇಶದ ಆಸ್ತಿ ಲೂಟಿ ಹೊಡೆದ ಲಲಿತ್ ಮೋದಿ, ನೀರವ್ ಮೋದಿ ವಿದೇಶಕ್ಕೆ ಹೋಗಿ ಪಂಚತಾರ ಹೋಟೆಲ್‌ಗಳಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು
ಮಾಜಿ ಸಚಿವ ಹಾಗೂ ಎಂಎಲ್ಸಿ ನಸೀರ್ ಅಹಮದ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಮುಸ್ಲಿಮರ ಮೀಸಲಾತಿಯನ್ನು ಕಿತ್ತುಕೊಂಡು ಅನ್ಯಾಯ ಎಸಗಿದೆ ಕೋಲಾರದಿಂದಲೇ ರಾಹುಲ್ ನೇತೃತ್ವದಲ್ಲಿ ಈ ವಿಚಾರದಲ್ಲೂ ಹೋರಾಟ ಆರಂಭವಾಗಿದೆ. ಈಗಾಗಲೇ ನ್ಯಾಯಾಲಯ ಕೂಡ ಕೇಂದ್ರ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾ ಇದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ರಾಹುಲ್ ಗಾಂಧಿ ಅವರು ಸಮಾಜ ಜೋಡಿಸಿದರೆ, ಬಿಜೆಪಿ ಸಮಾಜ ಒಡೆಯುತ್ತಿದೆ ಎಂದು ಅಕ್ರೋಶ ವ್ಯಕ್ತ ಪಡೆಸಿದರು.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿಮುಂದಿನ ಚುನಾವಣೆಯಲ್ಲಿ ಸತ್ಯಕ್ಕೆ ಗೆಲುವು ಸಿಗಬೇಕು ಎಂದು ತಿಳಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಶಾಸಕ ವೆಂಕಟರಾಮಯ್ಯ, ಮಾಜಿ ಸಚಿವ ಎಂ.ಆರ್.ಸೀತಾರಾಂ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಕೋಲಾರದ ಟಿಕೆಟ್ ಅಭ್ಯರ್ಥಿ ಕೊತ್ತೂರು ಮಂಜುನಾಥ್, ಶಾಸಕರಾದ ಕೆ.ವೈ.ನಂಜೇಗೌಡ, ರೂಪಕಲಾಶಶಿಧರ್, ಎಂಎಲ್‌ಸಿ ಎಂ.ಎಲ್.ಅನಿಲ್‌ಕುಮಾರ್, ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಇದ್ದರು.