ಬಿಜೆಪಿ ಬೆಂಬಲಿಸಲು ನಾರಾಯಣ ಸ್ವಾಮಿ ಕರೆ

ವಿಜಯಪುರ.ಏ೧೫:ಬೆಳಗಾಗುತ್ತಲೇ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ ಅದೇ ರೀತಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ೪೦೦ಕ್ಕೂ ಹೆಚ್ಚು ಸದಸ್ಯರುಗಳನ್ನು ಹೊಂದಿ ಅಧಿಕಾರ ಹಿಡಿಯುವುದು ಸತ್ಯವಾಗಿದ್ದು ಮತದಾರರು ೪೦೦ ಮಂದಿಯಲ್ಲಿ ಒಬ್ಬರಾಗುವಂತಹ ಸಂಸದರನ್ನು ಆಯ್ಕೆ ಮಾಡಬೇಕೋ ಇಲ್ಲವೇ ೪೦ ಮಂದಿಯಲ್ಲಿ ಒಬ್ಬರಾಗುವಂತಹ ಸಂಸದರನ್ನು ಆಯ್ಕೆ ಮಾಡಬೇಕೋ ಮತದಾರರು ಯೋಚಿಸಬೇಕಾಗಿದೆ ಎಂದು ಅದಕ್ಕಾಗಿ ಬಿಜೆಪಿ ಲೋಕಸಭಾ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಕೆ ಸುಧಾಕರ್ ರವರಿಗೆ ಮತದಾನ ಮಾಡಬೇಕಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ ತಿಳಿಸಿದರು.
ಅವರು ಇಲ್ಲಿಗೆ ಸಮೀಪದ ಹೋಬಳಿಯ ಬಿಜ್ಜವರ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಾವಿರಾರು ವರ್ಷಗಳ ಹಿಂದೆಯೇ ಪುರಾತನ ಭಾರತ ದೇಶದಲ್ಲಿ ನಳಂದ, ತಕ್ಷಶಿಲೆ ಮುಂತಾದ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆಯಲು ಹೊರದೇಶಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿನ ಅಭಿವೃದ್ಧಿ ಮತ್ತೆ ಮರುಕಳಿಸಬೇಕೆಂದರೆ ನರೇಂದ್ರ ಮೋದಿ ರವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆ ಮಾಡಬೇಕಾಗಿದೆ ಎಂದು ತಿಳಿಸಿದರು.
ದೇವನಹಳ್ಳಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಣೂರು ಭೀಮರಾಜುರವರು ಮಾತನಾಡಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪಡೆದಂತಹ ಒಟ್ಟಾರೆ ಮತಗಳು ಈ ಬಾರಿ ಎರಡು ಪಕ್ಷಗಳ ಸಂಯುಕ್ತ ಅಭ್ಯರ್ಥಿಯಾಗಿರುವ ಕೆ.ಸುಧಾಕರ್ ಅವರಿಗೆ ಬರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರಾಗಿದ್ದು ಆ ನಿಟ್ಟಿನಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಕಾರ್ಯಯೋನ್ಮುಖರಾಗಬೇಕೆಂದು ತಿಳಿಸಿದರು.
ಮಾಜಿ ಶಾಸಕರಾದ ಪಿಳ್ಳ ಮನಿಶಾಮಪ್ಪ ರವರು ಮಾತನಾಡಿ ೧೮ ವರ್ಷ ತುಂಬಿರುವ ಹೊಸದಾಗಿ ಮತದಾನ ಮಾಡಲಿರುವ ಮತದಾರರ ಸಂಖ್ಯೆ ಸುಮಾರು ೬೦ ಸಾವಿರದಷ್ಟು ಅವರೆಲ್ಲರೂ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತದಾನ ಮಾಡುವ ಸಂಭವ ಹೆಚ್ಚಾಗಿದ್ದು ಎಲ್ಲರಲ್ಲಿಯೂ ಮೋದಿಯ ಅಭಿವೃದ್ಧಿ ಕೆಲಸ ಕಾರ್ಯಗಳು ಕಂಡುಬರುತ್ತಿದ್ದು ಅವರುಗಳ ಆಶಯಗಳನ್ನು ಮತಗಳನ್ನಾಗಿ ಪರಿವರ್ತಿಸುವ ಕೆಲಸ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರದ್ದು ಎಂದು ತಿಳಿಸಿದರು.
ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ರವರು ಮಾತನಾಡಿ ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಂದ ಸಮನ್ವಯ ಸಮಿತಿ ರಚಿಸಿದ್ದು ಎರಡು ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕಾರ್ಯ ನಿರ್ವಹಿಸಿ ಕೆ ಸುಧಾಕರ್ ರವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವಂತಾದಲ್ಲಿ ಇದೆ ಸಮನ್ವಯ ಸಮಿತಿ ನಿರಂತರವಾಗಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ಜಿ ಚಂದ್ರಣ್ಣ, ಜೆಡಿಎಸ್ ಕಾರ್ಯದರ್ಶಿ ರವೀಂದ್ರ,ಬಿಜೆಪಿ ತಾಲೂಕು ಅಧ್ಯಕ್ಷ ಸುನಿಲ್ ಸುಂದರೇಶ್, ಕಾರ್ಯದರ್ಶಿ ರವಿಕುಮಾರ್, ಬಿಜವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವ್, ಮುಖಂಡರುಗಳಾದ ಚೇತನ್ ಗೌಡ, ನಾರಾಯಣಸ್ವಾಮಿ, ಬಮೂಲ್‌ನ ಮಾಜಿ ನಿರ್ದೇಶಕರುಗಳಾದ ದಂಡಿಗನಹಳ್ಳಿ ನಾರಾಯಣಸ್ವಾಮಿ, ಹಾಲಿ ನಿರ್ದೇಶಕ ಇರಿಗೇನಹಳ್ಳಿ ಶ್ರೀನಿವಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಕನಕರಾಜು ಬಿಜೆಪಿ ಜಿಲ್ಲಾ ಸಂಚಾಲಕ ಗಿರೀಶ್ ಆರಾಧ್ಯ ,ಹಾಪ್ ಕಾಮ್ಸ್ ಮಾಜಿ ನಿರ್ದೇಶಕರಾದ ಹುರಳುಗುರ್ಕಿ ಶ್ರೀನಿವಾಸ್, ಬಿಜೆಪಿ ವಿಜಯಪುರ ಹೋಬಳಿ ಅಧ್ಯಕ್ಷ ಅನಿಲ್, ಜೆಡಿಎಸ್ ನ ಹೋಬಳಿ ಅಧ್ಯಕ್ಷರಾದ ಪುರ ಕೃಷ್ಣಪ್ಪ, ಕಾರ್ಯದರ್ಶಿ ಕಲ್ಯಾಣಕುಮಾರ್ ಬಾಬು, ಬುಳ್ಳಳ್ಳಿ ರಾಜಪ್ಪ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.