ಬಿಜೆಪಿ ಬಿಕ್ಕಟ್ಟಿಗೆ ವರಿಷ್ಠರ ಮುಲಾಮು

ಬೆಂಗಳೂರು, ಜೂ.೯- ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಸಂಘರ್ಷ, ನಾಯಕತ್ವ ಬದಲಾವಣೆ ಚರ್ಚೆ, ಬೇಗುದಿ ಎಲ್ಲದಕ್ಕೂ ಇತಿಶ್ರೀ ಹಾಡಲು ಬಿಜೆಪಿ ವರಿಷ್ಠರು ಮುಂದಾಗಿದ್ದು, ಲಾಕ್‌ಡೌನ್ ಮುಗಿದ ಬಳಿಕ ಪಕ್ಷದ ಕೋರ್‌ಕಮಿಟಿ ಮತ್ತು ಸಮನ್ವಯ ಸಮಿತಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಸಭೆಯ ತೀರ್ಮಾನಗಳು ಕುತೂಹಲ ಮೂಡಿಸಿದೆ.
ಪಕ್ಷದ ಹೈ ಕಮಾಂಡ್‌ನ ಸೂಚನೆ ಮೇರೆಗೆ ಈ ಸಭೆಯನ್ನು ಕರೆಯಲಾಗಿದೆ, ಜೂ. ೧೫ರ ನಂತರ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ರಾಜ್ಯಕ್ಕೆ ಭೇಟಿ ನೀಡಲಿದ್ದು, ಅವರ ನೇತೃತ್ವದಲ್ಲೇ ಕೋರ್‌ಕಮಿಟಿ ಮತ್ತು ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸಹ ಪಾಲ್ಗೊಳ್ಳುವ ಸಾಧ್ಯತೆಗಳಿವೆ.
ಈ ಸಭೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಬಗ್ಗೆಯೂ ತೀರ್ಮಾನಗಳು ಆಗಲಿದ್ದು, ಈ ಸಭೆಯ ನಂತರ ಬಿಜೆಪಿಯಲ್ಲಿನ ಬಿಕ್ಕಟ್ಟುಗಳಿಗೆ ಪರಿಹಾರ ಸಿಗುವ ಸಾಧ್ಯತೆಗಳಿದ್ದು, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೈಕಮಾಂಡ್ ಕೇಳಿದರೆ ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದು, ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿ, ನಾಯಕತ್ವ ಬದಲಾವಣೆ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದು ಬಿಜೆಪಿಯಲ್ಲಿ ಅಂರ್ತಯುದ್ಧ ಬಿರುಸಾಗಿ, ನಾಯಕತ್ವ ಪರ-ವಿರೋಧ ಹೇಳಿಕೆಗಳು, ಸಹಿ ಸಂಗ್ರಹದ ಚಟುವಟಿಕೆಗಳು ನಡೆದು ಬಿಜೆಪಿಯಲ್ಲಿನ ಒಳ ಜಗಳ ಬೀದಿಗೆ ಬಿದ್ದಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಕ್ಷದ ಹೈ ಕಮಾಂಡ್ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಮೂಲಕ ಯಾರೂ ಬಹಿರಂಗವಾಗಿ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನೂ ನೀಡಿ ಎಲ್ಲರ ಬಾಯಿಗೆ ಬೀಗ ಬೀಳುವಂತೆ ನೋಡಿಕೊಂಡಿತು. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಎಲ್ಲ ಪ್ರಮುಖ ನಾಯಕರುಗಳು ಬದಲಾವಣೆ ಇಲ್ಲ ಎಂಬ ಹೇಳಿಕೆ ನೀಡಿ ಬಿಜೆಪಿಯ ಗಾಯಕ್ಕೆ ಮುಲಾಮು ಸವರುವ ಪ್ರಯತ್ನ ನಡೆಸಿದ್ದರು. ಇಷ್ಟಾದರೂ ಬಿಜೆಪಿಯಲ್ಲಿ ಅಂರ್ತಯುದ್ಧ ನಿಂತಿಲ್ಲ, ಮುಖ್ಯ ಸಚೇತಕ ಸುನೀಲ್ ಕುಮಾರ್, ಶಾಸಕರ ಅಹವಾಲು ಆಲಿಸಲು ಪ್ರತ್ಯೇಕ ಸಭೆ ಕರೆಯುವಂತೆ ಟ್ವೀಟ್ ಮೂಲಕ ಒತ್ತಾಯಿಸಿದರು.
ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿನ ಆಂತರಿಕ ಸಂಘರ್ಷಕ್ಕೆ ತೆರೆ ಎಳೆಯಲು ಕೋರ್ ಕಮಿಟಿ ಮತ್ತು ಸಮನ್ವಯ ಸಮಿತಿ ಸಭೆಯನು ನಡೆಸಲು ನಿರ್ಧರಿಸಲಾಗಿದೆ.
ಈ ಸಭೆಯ ಬಳಿಕ ನಾಯಕತ್ವ ಬದಲಾವಣೆ ಚರ್ಚೆಗಳು ಕೊನೆಯಾಗುತ್ತವೋ, ಇಲ್ಲ ನಾಯಕತ್ವ ಬದಲಾವಣೆ ವಿಚಾರ ತಾರ್ಖಿಕ ಹಂತಕ್ಕೆ ಮುಟ್ಟುತ್ತದೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.