ಬಿಜೆಪಿ ಬಿಕ್ಕಟ್ಟಿಗೆ ಅರುಣ್ ಮುಲಾಮು

ಬೆಂಗಳೂರು,ಜೂ.೧೬- ರಾಜ್ಯಕ್ಕೆ ಇಂದು ಭೇಟಿ ನೀಡುತ್ತಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಬಿಜೆಪಿಯಲ್ಲಿನ ಬಿಕ್ಕಟ್ಟಿಗೆ ಯಾವ ಪರಿಹಾರ ಸೂತ್ರ ಹೆಣೆಯುವರು ಎಂಬುದು ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ನಾಯಕತ್ವ ಬದಲಾಗಬೇಕೇ ಬೇಡವೇ ಎಂಬುದನ್ನು ವರಿಷ್ಠರು ಅರುಣ್‌ಸಿಂಗ್‌ರವರು ನೀಡುವ ವರದಿಯಾಧರಿಸಿ ತೀರ್ಮಾನ ಕೈಗೊಳ್ಳುವ ಹಿನ್ನೆಲೆಯಲ್ಲಿ ಅರುಣ್‌ಸಿಂಗ್‌ರವರ ರಾಜ್ಯ ಭೇಟಿಗೆ ಇನ್ನಿಲ್ಲದ ಮಹತ್ವ ಬಂದಿದೆ.
ಇದೆಲ್ಲದರ ಮಧ್ಯೆಯೇ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಜತೆ ರಾಜ್ಯದ ಆಗು-ಹೋಗುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಅರುಣ್‌ಸಿಂಗ್‌ರವರ ರಾಜ್ಯ ಭೇಟಿಗೂ ಮುನ್ನವೇ ಪ್ರಧಾನಿ ಮೋದಿ-ಗೌಡರ ಭೇಟಿ ಚರ್ಚೆಗಳಿಗೆ ಹೆಚ್ಚಿನ ಪ್ರಾಮುಖ್ಯ ಬಂದಿದೆ. ಈ ಭೇಟಿಯಲ್ಲಿ ಯಾವ ವಿಚಾರಗಳು ಚರ್ಚೆಯಾಗಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ನಿನ್ನೆ ರಾತ್ರಿಯಷ್ಟೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಭೆ ನಡೆಸಿ ರಾಜ್ಯದ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆಸಿದರು. ಈ ಎಲ್ಲ ಹಿನ್ನೆಲೆಯಲ್ಲಿ ಅರುಣ್‌ಸಿಂಗ್ ರಾಜ್ಯ ಭೇಟಿ ಅವರು ವರಿಷ್ಠರಿಂದ ಯಾವ ಸಂದೇಶ ತರಲಿದ್ದಾರೆ ಎಂಬುದರ ಬಗ್ಗೆ ಬಿಜೆಪಿ ಪಾಳಯದಲ್ಲಿ ಚರ್ಚೆಗಳು ಬಿರುಸಾಗಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಎಂದು ಕೆಲ ಸಚಿವರು, ಶಾಸಕರುಗಳು ಹೈ ಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರೆ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾಗಬಾರದು, ಯಡಿಯೂರಪ್ಪನವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರಬೇಕು ಎಂದು ಹಲ ಸಚಿವರು, ಶಾಸಕರು ಪಟ್ಟು ಹಿಡಿದಿರುವುದು ಬಿಜೆಪಿಯಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಅರುಣ್‌ಸಿಂಗ್ ಇಂದಿನಿಂದ ೩ ದಿನಗಳ ಕಾಲ ರಾಜ್ಯದಲ್ಲೇ ಮೊಕ್ಕಾಂ ಹೂಡಿ ಸಚಿವರು, ಶಾಸಕರುಗಳು ಹಾಗೂ ಪ್ರಮುಖ ಮುಖಂಡರುಗಳ ಸಭೆ ನಡೆಸಿ ಎಲ್ಲರ ಅಭಿಪ್ರಾಯಗಳನ್ನು ಆಲಿಸುವರು.
ರಾಜ್ಯದ ಬೆಳವಣಿಗೆಗಳ ಬಗ್ಗೆ ಅರುಣ್‌ಸಿಂಗ್‌ರವರು ನೀಡುವ ವರದಿಯಾಧರಿಸಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದು, ಹೈಕಮಾಂಡ್‌ನ ತೀರ್ಮಾನ ಏನಾಗಲಿದೆ ಎಂಬ ಕುತೂಹಲ ಎಲ್ಲರ ಮನದಲ್ಲಿದೆ.
ರಾಜ್ಯದಲ್ಲಿ ಮೂರು ದಿನ ಮೊಕ್ಕಾಂ ಹೂಡಲಿರುವ ಅರುಣ್‌ಸಿಂಗ್ ಇಂದು ಸಂಜೆ ಸಚಿವರುಗಳ ಜತೆ ಚರ್ಚೆ ನಡೆಸಲಿದ್ದು, ನಾಳೆ ಶಾಸಕರುಗಳ ಅಹವಾಲು ಆಲಿಸಲಿದ್ದಾರೆ.
ಶಾಸಕರ ಈ ಅಹವಾಲು ಆಲಿಕೆಗೆ ಪ್ರತಿಯೊಬ್ಬ ಶಾಸಕರು ಬರಬೇಕು ಎಂಬ ಕಡ್ಡಾಯ ಸೂಚನೆ ಇರದ ಕಾರಣ ಎಷ್ಟು ಜನ ಶಾಸಕರು ಅರುಣ್‌ಸಿಂಗ್‌ರವರನ್ನೂ ಭೇಟಿ ಮಾಡುತ್ತಾರೆ ಎಂಬುದು ಖಚಿತವಾಗಿಲ್ಲ. ಅಪೇಕ್ಷಿತ ಶಾಸಕರಷ್ಟೇ ಅರುಣ್‌ಸಿಂಗ್‌ರವರನ್ನು ಭೇಟಿ ಮಾಡಬಹುದು ಯಾರಿಗೂ ಅರುಣ್‌ಸಿಂಗ್‌ರವರನ್ನೂ ಭೇಟಿ ಮಾಡಿ ಎಂಬ ಸೂಚನೆಯೂ ಪಕ್ಷದಿಂದ ಹೋಗಿಲ್ಲ. ಹಾಗಾಗಿ, ಎಲ್ಲ ಬಿಜೆಪಿ ಶಾಸಕರು ಅರುಣ್‌ಸಿಂಗ್‌ರವರನ್ನು ಭೇಟಿ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಕೆಲ ಶಾಸಕರಷ್ಟೇ ಅರುಣ್‌ಸಿಂಗ್‌ರವರನ್ನು ಭೇಟಿ ಮಾಡುವ ಸಾಧ್ಯತೆಗಳು ಹೆಚ್ಚಿದೆ.
ಹಲವು ಶಾಸಕರು ಅರುಣ್‌ಸಿಂಗ್‌ರವರ ಭೇಟಿ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಅರುಣ್‌ಸಿಂಗ್‌ರವರ ಸಭೆಯಲ್ಲಿ ಪಾಲ್ಗೊಳ್ಳಲು ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿರುವ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅರುಣ್‌ಸಿಂಗ್‌ರವರ ಸಭೆಯಲ್ಲಿ ಪಾಲ್ಗೊಳ್ಳಲು ತಮಗೆ ಪಕ್ಷದಿಂದಾಗಲಿ, ನಾಯಕತ್ವ ಪರ ವಿರೋಧಿ ಬಣದಿಂದಾಗಲಿ ಕರೆ ಬಂದಿಲ್ಲ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದಿದ್ದಾರೆ.
ನಾಯಕತ್ವ ಪರ-ವಿರೋಧಿ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳದ ಬಹುತೇಕ ಶಾಸಕರ ಅಭಿಪ್ರಾಯವೂ ಇದೇ ಆಗಿದೆ. ಹಾಗಾಗಿ, ಪಕ್ಷದ ಕೈ ಕಮಾಂಡ್ ತೆಗೆದುಕೊಳ್ಳುವ ತೀರ್ಮಾನಗಳು ರಾಜ್ಯದ ಮುಂದಿನ ರಾಜಕೀಯದ ಆಗು-ಹೋಗುಗಳನ್ನು ನಿರ್ಧರಿಸಲಿವೆ.

ಎಲ್ಲವೂ ಬೆಂಗಳೂರಿನಲ್ಲಿ ಹೇಳ್ತೀನಿ; ಅರುಣ್
ನವದೆಹಲಿ,ಜೂ.೧೬- ಕರ್ನಾಟಕ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಏನು ಹೇಳಬೇಕೋ ಅದನ್ನು ಬೆಂಗಳೂರಿನಲ್ಲೇ ಹೇಳುತ್ತೇನೆ ಎಂದು ರಾಜ್ಯ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ಹೇಳಿದರು.
ಕರ್ನಾಟಕ ಬಿಜೆಪಿಯಲ್ಲಿ ಉಲ್ಬಣಿಸಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ೩ ದಿನಗಳ ರಾಜ್ಯ ಭೇಟಿಗೆ ತೆರಳುವ ಮುನ್ನ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್‌ಸಿಂಗ್, ಇಲ್ಲಿ ಏನನ್ನೂ ಹೇಳುವುದಿಲ್ಲ. ಎಲ್ಲವನ್ನೂ ಬೆಂಗಳೂರಿನಲ್ಲೇ ಹೇಳುತ್ತೇನೆ ಎಂದರು. ಬಿಜೆಪಿ ಬಿಕ್ಕಟ್ಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರ ನೀಡಲು ಬಯಸಲಿಲ್ಲ.