ಬಿಜೆಪಿ ಬಾಣಕ್ಕೆ ರಾಹುಲ್ ಹೆದರಲ್ಲ

ನವದೆಹಲಿ,ಮಾ.೨೩- ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಧ್ವನಿಯನ್ನು ಹತ್ತಿಕಲು ಎಲ್ಲ ಹಂತದ ಪ್ರಯೋಗ ಮಾಡಲಾಗುತ್ತಿದೆ . ಇಂತಹ ಬೆದರಿಕೆಗೆ ಸಹೋದರ ಎಂದಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಗುಡುಗಿದ್ದಾರೆ.
ರಾಹುಲ್ ಅವರು ಸತ್ಯವನ್ನು ಮಾತನಾಡುತ್ತಾರೆ. ದೇಶದ ಜನರ ಧ್ವನಿ ಎತ್ತುವುದನ್ನು ಮುಂದುವರಿಸಲಿದ್ದಾರೆ. ಸತ್ಯದ ಶಕ್ತಿ ಮತ್ತು ಕೋಟ್ಯಂತರ ದೇಶವಾಸಿಗಳ ಪ್ರೀತಿ ಅವರೊಂದಿಗಿದೆ ಎಂದಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು ಬಿಜೆಪಿ ಬಾಣಗಳಿಗೆ ಬೆದರುವುದೂ ಇಲ್ಲ ಬಗ್ಗುವುದು ಇಲ್ಲ ಎಂದಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಶಾಸಕ ಅರ್ಜುನ್ ಮೊದ್ವಾಡಿಯಾ ಪ್ರತಿಕ್ರಿಯಿಸಿ”ಸತ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಕಿರುಕುಳ ನೀಡಲಾಗುತ್ತದೆ, ಆದರೆ ಸತ್ಯ ಮಾತ್ರ ಮೇಲುಗೈ ಸಾಧಿಸುತ್ತದೆ. ಗಾಂಧಿ ವಿರುದ್ಧ ಹಲವಾರು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ, ಆದರೆ ಈ ಎಲ್ಲದರಿಂದ ಅವರು ಹೊರಬರುತ್ತಾರೆ. ನಮಗೆ ನ್ಯಾಯ ಸಿಗುತ್ತದೆ” ಎಂದು ಹೇಳಿದ್ದಾರೆ.

ಕೇಜ್ರಿವಾಲ್ ರಾಹುಲ್ ಗೆ ಬೆಂಬಲ:
ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಕೂಡ ರಾಹುಲ್ ಗಾಂದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೇತರ ನಾಯಕರು ಹಾಗೂ ಪಕ್ಷಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಅವರನ್ನು ಮಟ್ಟ ಹಾಕಲು ಷಡ್ಯಂತ್ರ ನಡೆಸಲಾಗುತ್ತಿದೆ, ನಮಗೆ ಕಾಂಗ್ರೆಸ್‌ನೊಂದಿಗೆ ಭಿನ್ನಾಭಿಪ್ರಾಯವಿದೆ, ಆದರೆ ರಾಹುಲ್ ಗಾಂಧಿಯನ್ನು ಈ ರೀತಿ ಮಾನನಷ್ಟ ಪ್ರಕರಣದಲ್ಲಿ ಸಿಲುಕಿಸುವುದು ಸರಿಯಲ್ಲ ಎಂದಿದ್ದಾರೆ.
ನ್ಯಾಯಾಲಯವನ್ನು ಗೌರವಿಸುತ್ತೇವೆ ಆದರೆ ನಿರ್ಧಾರವನ್ನು ಒಪ್ಪುವುದಿಲ್ಲ” ಎಂದು ಅವರು ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ದೇಶದೆಲ್ಲೆಡೆ ಪ್ರತಿಭಟನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವ ಕ್ರಮದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ದೇಶಾದ್ಯಂತ ಪ್ರತಿಭಟನೆ ನಡೆಸಿದರು.ಮುಂಬೈ, ದೆಹಲಿ, ಡೆಹಾರಾಡೂನ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.