ಬಿಜೆಪಿ ಬಣಗಳ ತಿಕ್ಕಾಟದಿಂದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ: ಡಾ. ಅಜಯಸಿಂಗ್ ವಿಶ್ವಾಸ

ಕಲಬುರಗಿ,ಏ.03:ಬಿಜೆಪಿ ಬಣಗಳ ತಿಕ್ಕಾಟದಿಂದಾಗಿ ಕರ್ನಾಟಕ ರಾಜ್ಯದಲ್ಲಿನ ಸರ್ಕಾರದ ಆಡಳಿತವು ಸಂಪೂರ್ಣ ಹದಗೆಟ್ಟು ಹೋಗಿದೆ. ಇದರಿಂದ ಬೇಸತ್ತಿರುವ ಮತದಾರರು ರಾಜ್ಯದಲ್ಲಿನ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವರು ಎಂದು ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ತಮಗೆ ಗೊತ್ತಿಲ್ಲದಂತೆಯೇ ಮುಖ್ಯಮಂತ್ರಿಗಳು ತಮ್ಮ ಖಾತೆಯಲ್ಲಿನ ಅನುದಾನ ಬಳಸಿದ್ದಾರೆ ಎಂದು ನೇರವಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಆರೋಪಕ್ಕೆ ಮತ್ತೆ ಈಶ್ವರಪ್ಪ ಅವರೂ ಸಹ ಸಮರ್ಥಿಸಿಕೊಂಡಿದ್ದಾರೆ. ಇದನ್ನು ನೋಡಿದರೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿರುವುದಕ್ಕೆ ತಾಜಾ ನಿದರ್ಶನವಾಗಿದೆ ಎಂದರು.
ಬಿಜೆಪಿ ಬಣಗಳ ತಿಕ್ಕಾಟಕ್ಕೆ ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧ ನೀಡಿರುವ ದೂರೇ ಕೈಗನ್ನಡಿಯಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಅನುಭವಿ ರಾಜಕಾರಣಿಗಳು. ಈ ಹಿಂದೆ ರಾಜ್ಯದ ಉಪ ಮುಖ್ಯಮಂತ್ರಿಗಳಾದವರು. ಅಂತಹ ಮಹಾನ್ ನಾಯಕರೇ ರಾಜ್ಯಪಾಲರಿಗೆ ಹಾಗೂ ಪಕ್ಷದ ವರಿಷ್ಠರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದೂರು ಸಲ್ಲಿಸುತ್ತಾರೆಂದರೆ ಹಿಂದೆಂದೂ ಆಗಿರದಂತಹ ಬೆಳವಣಿಗೆಯಾಗಿದೆ. ಒಬ್ಬ ಮುಖ್ಯಮಂತ್ರಿಗಳ ವಿರುದ್ಧ ಸಚಿವರೇ ನೇರವಾಗಿ ಆರೋಪವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದು ಇದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಮೊದಲು. ಈಶ್ವರಪ್ಪ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಮೇಲಿನ ಹಂತದಲ್ಲಿ ಹಿರಿಯ ಸಚಿವರೇ ಅಪಸ್ವರ ಎತ್ತಿದರೇ ಕೆಳ ಹಂತದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿಯವರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ ಆಂತರಿಕವಾಗಿ ಬಿಜೆಪಿ ಬಹಳಷ್ಟು ಕುಗ್ಗಿ ಹೋಗಿದೆ. ಇಂತಹ ಪಕ್ಷದಿಂದ ಜನಪರ ಆಡಳಿತ ಮುಂದುವರೆಸಿಕೊಂಡು ಹೋಗುವುದು ಅಸಾಧ್ಯ ಎಂದು ಅವರು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಸಮಸ್ಯೆ ಉದ್ಭವಿಸುತ್ತಿದೆ. ಇದೇನೂ ಹೊಸತೇನಲ್ಲ ಎಂದು ಹೇಳಿದ ಡಾ. ಅಜಯಸಿಂಗ್ ಅವರು, ಈ ಹಿಂದೆ 2008ರಲ್ಲಿಯೂ ಸಹ ಇದೇ ರೀತಿಯ ಸಮಸ್ಯೆ ಆಗಿತ್ತು. ಬಿಜೆಪಿ ಗಣಗಳ ರಾಜಕೀಯದಿಂದಾಗಿ ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿತು. ಅದೇ ರೀತಿಯ ಪುನರಾವರ್ತನೆ ಈಗಲೂ ಸಹ ಮುಂದುವರೆದಿದೆ ಎಂದು ಟೀಕಿಸಿದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹೊರಗಿನವರು ಎಂಬ ಕಾರಣಕ್ಕೆ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ ಅವರು ಕಣಕ್ಕಿಳಿದಿದ್ದಾರೆ. ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದ್ದು, ಇದು ಆ ಪಕ್ಷವನ್ನು ಬಹುವಾಗಿ ಕಾಡುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಮಾಲಾ ಬಿ. ನಾರಾಯಣರಾವ್ ಅವರ ಪರ ಮತದಾರರು ವಾಲುತ್ತಿದ್ದಾರೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿಯೂ ಸಹ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರ ವಿರೋಧಿ ಅಲೆ ಎದ್ದಿದೆ. ಹೀಗಾಗಿ ಆ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.