ಬಿಜೆಪಿ ಬಂಡಾಯ ಶಮನಕ್ಕೆ ವರಿಷ್ಠರ ಹರಸಾಹಸ

ಬೆಂಗಳೂರು,ಏ.೧೪:ಮೇ ೧೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ೨ ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಟಿಕೆಟ್ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದು, ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಕಣಕ್ಕಿಳಿಯಲು ಟಿಕೆಟ್ ಆಕಾಂಕ್ಷಿಗಳು ಮುಂದಾಗಿರುವ ಬೆನ್ನಲ್ಲೆ ಬಂಡಾಯ, ಅತೃಪ್ತಿ, ಅಸಮಾಧಾನಗಳನ್ನು ಸರಿಪಡಿಸಲು ಹೈಕಮಾಂಡ್ ರಂಗಪ್ರವೇಶ ಮಾಡಿ ಬಂಡಾಯವನ್ನು ಶಮನಗೊಳಿಸಲು ಹರಸಾಹಸ ನಡೆಸಿದೆ. ಬಂಡಾಯ ಶಮನ ಬಿಜೆಪಿಗೆ ಸವಾಲಾಗಿದೆ.ಬಿಜೆಪಿಯಲ್ಲಿ ಉಂಟಾಗಿರುವ ಬಂಡಾಯ, ಅಸಮಾಧಾನಗಳನ್ನು ಸರಿಪಡಿಸುವಂತೆ ವರಿಷ್ಠರು ರಾಜ್ಯ ನಾಯಕರುಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದು, ಇದರ ಬೆನ್ನಲ್ಲೆ ನಿನ್ನೆ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ನಿವಾಸದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ಕೇಂದ್ರ ಸಚಿ ಪ್ರಲ್ಹಾದ್ ಜೋಷಿ, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿ ಅಣ್ಣಾಮಲೈ, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾಕರಂದ್ಲಾಜೆ ಇವರುಗಳು ಸಭೆ ಸೇರಿ ಬಂಡಾಯ ಶಮನದ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಿದರು.ಬಂಡಾಯ ಎದ್ದಿರುವ ಹಾಲಿ ಹಾಗೂ ಮಾಜಿ ಶಾಸಕರುಗಳನ್ನು ಸಂಪರ್ಕಿಸಿ ಅವರನ್ನು ಸಮಾಧಾನಪಡಿಸಲು ಏನೆಲ್ಲ ಮಾಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರುಣ್‌ಸಿಂಗ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇವರುಗಳು ಬಂಡಾಯದ ಬಾವುಟ ಹಾರಿಸಿರುವವರ ಜತೆ ಮಾತನಾಡಬೇಕು ಎಂಬ ಹೈಕಮಾಂಡ್‌ನ ಸೂಚನೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ಹೈಕಮಾಂಡ್‌ನ ಸೂಚನೆಯಂತೆ ಎಲ್ಲರ ಜತೆ ಮಾತನಾಡಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದಾರೆ.ಬಂಡಾಯವನ್ನು ಈಗಲೇ ಚಿವುಟಿ ಹಾಕಬೇಕು, ಇಲ್ಲದಿದ್ದರೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ತೊಂದರೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು ಅತೃಪ್ತರ ಜತೆ ಮಾತುಕತೆ ನಡೆಸಿದ್ದಾರೆ.ಕೆಲ ಅತೃಪ್ತರು ಯಡಿಯೂರಪ್ಪರವರ ಮಾತಿಗೆ ತಲೆದೂಗಿದ್ದಾರೆ. ಆದರೆ, ಕೆಲವರು ಯಾರ ಮಾತಿಗೂ ಸೊಪ್ಪು ಹಾಕಿಲ್ಲ. ಅದರಲ್ಲೂ ಅರುಣ್ ಸಿಂಗ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಮಾತನಾಡಲು ಬಂಡಾಯ ಅಭ್ಯರ್ಥಿಗಳು ಒಪ್ಪಿಲ್ಲ ಎಂದು ಹೇಳಲಾಗಿದೆ. ಈ ಎಲ್ಲದರ ನಡುವೆ ಬಿಜೆಪಿಯ ನಾಯಕರುಗಳು ಬಂಡಾಯ ಶಮನಕ್ಕೆ ಇನ್ನಿಲ್ಲದ ಕಸರತ್ತನ್ನು ನಡೆಸಿದ್ದಾರೆ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂಬ ಭರವಸೆಯನ್ನೂ ರಾಜ್ಯ ನಾಯಕರು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಬಂಡಾಯ ಶಮನವಾಗಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ನಾಯಕರು ಹೊಂದಿದ್ದಾರೆ, ಏನೇ ಆದರೂ ಬಂಡಾಯವನ್ನು ಶಮನ ಮಾಡುವುದು ಬಿಜೆಪಿ ನಾಯಕರಿಗೆ ದೊಡ್ಡ ಸವಾಲಾಗಿದೆ.
ಅನ್ಯ ಪಕ್ಷಗಳ ವಲಸೆ ತಡೆಯಲು ಪ್ರಯತ್ನ
ಈ ಚುನಾವಣೆಯಲ್ಲಿ ಕೈತಪ್ಪಿರುವ ಹಾಲಿ ಹಾಗೂ ಕೆಲ ಮಾಜಿ ಶಾಸಕರು ಕಾಂಗ್ರೆಸ್-ಜೆಡಿಎಸ್‌ಗೆ ವಲಸೆ ಹೋಗುವುದನ್ನು ತಡೆಯಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದಾರೆ. ಕೆಲ ಹಾಲಿ ಹಾಗೂ ಮಾಜಿ ಶಾಸಕರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪರ್ಕದಲ್ಲಿದ್ದು, ಆತುರದ ನಿರ್ಧಾರ ಬೇಡ, ಪಕ್ಷ ನಿಮ್ಮ ಅನುಭವವನ್ನು ಬಳಸಿಕೊಳ್ಳುತ್ತದೆ ದುಡುಕಬೇಡಿ ಎಂದು ಹೇಳಿ ಮನವೊಲಿಸುವ ಕೆಲಸ ನಡೆಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.