ಬಿಜೆಪಿ ಬಂಡಾಯ ಅಭ್ಯರ್ಥಿ ಕಣದಲ್ಲಿ: ಬಿಜೆಪಿಗೆ ಮಗ್ಗಲು ಮುಳ್ಳು

ರುದ್ರಪ್ಪ ಆಸಂಗಿ

ವಿಜಯಪುರ,ಏ.17:ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಮಾಜಿ ಅಧ್ಯಕ್ಷ ಡಾ. ಬಾಬುರಾಜೇಂದ್ರ ನಾಯಕ ಅವರು ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಕೋರಿ ಮಂಗಳವಾರ ನಾಮಪತ್ರ ಸಲ್ಲಿಸುವ ಮೂಲಕ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದು, ಬಿಜೆಪಿ ಅಧಿಕೃತ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಇದು ಮಗ್ಗಲು ಮುಳ್ಳಾಗಿ ಪರಿಣಮಿಸಿದೆ.
ಬಿಜೆಪಿಯ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ಸತತ ಮೂರು ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧಿಸಿದ್ದರು. ಈ ಬಾರಿ ಸಂಸದ ಜಿಗಜಿಣಗಿ ಅವರಿಗೆ ಟಿಕೆಟ್ ಸಿಗುವುದಿಲ್ಲ. ಹೊಸಬರಿಗೆ ಅವಕಾಶ ಸಿಗುತ್ತದೆ ಎಂದು ಬಲವಾಗಿ ನಂಬಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯಪುರ ಎಸ್.ಸಿ ಮೀಸಲು ಕ್ಷೇತ್ರದ ಚುನಾವಣೆ ಅಖಾಢಕ್ಕಿಳಿಯಲು ಬಿಜೆಪಿಯಲ್ಲಿ ಬಂಜಾರಾ ಸಮುದಾಯದ ಡಾ. ಬಾಬುರಾಜೇಂದ್ರ ನಾಯಕ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಹೇಂದ್ರ ನಾಯಕ ಆವರು ಟಿಕೆಟ್ ಗಿಟ್ಟಿಸಿಕೊಳ್ಳಲು ಭಾರಿ ಕಸರತ್ತು ಮಾಡಿದ್ದರು. ಡಾ. ಬಾಬುರಾಜೇಂದ್ರ ನಾಯಕ ಅವರು ಮಾಡು ಇಲ್ಲವೆ ಮಡಿ ಎಂಬಂತೆ ಬೆಂಗಳೂರು, ದೆಹಲಿಗೆ ಅಲೆದಾಡಿ ಟಿಕೆಟ್ ಪಡೆಯಲು ಶತಾಯಗತಾಯ ಶ್ರಮಿಸಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿ ಜಿಗಜಿಣಗಿ ಅವರ ಪಾಲಾಯಿತು.
ಹೀಗಾಗಿ ಟಿಕಟ್ ಪಡೆಯುವ ಪ್ರಯತ್ನವನ್ನು ನಿವೃತ್ತ ಪೊಲೀಸ್ ಅಧಿಕಾರಿ ಮಹೀಂದ್ರ ನಾಯಕ ಆವರು ಕೈ ಬಿಟ್ಟರು. ಆದರೆ ಡಾ. ಬಾಬುರಾಜೇಂದ್ರ ನಾಯಕ ಅವರು ಜಿಗಜಿಣಗಿ ಅವರಿಗೆ ಟಿಕೆಟ್ ನೀಡಿರುವುದನ್ನು ವಾಪಸ್ ಪಡೆಯುವಂತೆ ವರಿಷ್ಠರ ಮೇಲೆ ಒತ್ತಡ ಹೇರುವುದನ್ನು ಮುಂದುವರೆಸಿದ್ದಾರೆ. ಅದರ ಒಂದು ಭಾಗವಾಗಿ ಡಾ. ಬಾಬುರಾಜೇಂದ್ರ ನಾಯಕ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಬಂಡಾಯದ ಬೇಗುದಿ ಬಿಜೆಪಿಯಲ್ಲಿ ಮೂರ್ತ ಸ್ವರೂಪ ಪಡೆದಿದೆ.
ಜಿಗಜಿಣಗಿ ಅವರಿಗೆ ನೀಡಿದ ಟಿಕೆಟ್ ಹಿಂಪಡೆದು ತನಗೇ ಟಿಕೆಟ್ ನೀಡುವಂತೆ ನಾಯಕ ಅವರು ಆರ್.ಎಸ್.ಎಸ್., ಬಿಜೆಪಿ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ಫಲಿಸದ ಕಾರಣ ನಾಯಕ ಆವರು, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದು ಬಿಜೆಪಿಗೆ ಠಕ್ಕರ್ ಕೊಡುವ ಸನ್ನಾಹದಲ್ಲಿದ್ದಾರೆ.
ಏತನ್ಮಧ್ಯೆ ಪಕ್ಷದ ನಾಯಕರು ಡಾ. ಬಾಬುರಾಜೇಂದ್ರ ನಾಯಕ ಅವರ ಮನವೊಲಿಸಲು ಸಾಕಷ್ಟು ಪ್ರಯತ್ಮ ನಡೆಸಿ ವಿಫಲರಾಗಿದ್ದಾರೆ. ಹಾಗಾಗಿ ಡಾ. ಬಾಬುರಾಜೇಂದ್ರ ನಾಯಕ ಬಿಜೆಪಿ ಅಧಿಕೃತ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗಂತೂ ಮಗ್ಗಲು ಮುಳ್ಳಾಗಿ ಕಾಡುವ ಸಾಧ್ಯತೆ ಹೆಚ್ಚಿದೆ.
ಡಾ. ಬಾಬುರಾಜೇಂದ್ರ ನಾಯಕ ಅವರು ಬಿಜೆಪಿ ಬಂಡಾಯದ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದರೆ ಬಹಳಷ್ಟು ಬಂಜಾರಾ ಸಮುದಾಯದವರ ವೋಟ್ ಕಸಿಯುವ ಸಾಧ್ಯತೆ ಇದೆ. ಇದರಿಂದ ಬಿಜೆಪಿ ಗೆಲುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ. ಇದು ಕಾಂಗ್ರೆಸ್ಸಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ನಾನೀಗ ಬಿಜೆಪಿ ಬಂಡಾಯ ಅಭ್ಯರ್ಥಿ
ನನಗೆ ಸೋಮವಾರದವರೆಗೆ ಟಿಕೆಟ್ ಸಿಗುವ ಹೋಪ್ ಇತ್ತು. ಮಂಗಳವಾರ ಆ ಹೋಪ್ ಹೊರಟು ಹೋಗಿದೆ. ಹಾಗಾಗಿ ನಾನು ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾನು ನಾಮಪತ್ರ ವಾಪಸ್ ಪಡೆಯುವ ಮಾತೇ ಇಲ್ಲ. ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಇರುತ್ತೇನೆ ಎಂದು ಪಕ್ಚೇತರ ಅಭ್ಯರ್ಥಿ ಡಾ. ಬಾಬುರಾಜೇಂದ್ರ ನಾಯಕ ಸಂಜೆವಾಣಿಗೆ ತಿಳಿಸಿದರು.