ಮೈಸೂರು: ಮೇ.30:- ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಹಲವು ಸುಳ್ಳು ಭರವಸೆಗಳನ್ನು ನೀಡಿ ಅವನ್ನು ಈಡೇರಿಸದೇ ಕಾಂಗ್ರೆಸ್‍ನ ಪ್ರಣಾಳಿಕೆಗಳ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗುಡುಗಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವ ಹಕ್ಕು ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿಗೆ ಇಲ್ಲ. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ 34 ಮಂತ್ರಿಗಳನ್ನೊಳಗೊಂಡ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೇವಲ 15 ದಿನಗಳು ಕಳೆದಿವೆ. ನಾವು ಬಿಜೆಪಿಯಂತೆ ಸುಳ್ಳು ಹೇಳುವುದಿಲ್ಲ. ಚುನಾವಣಾ ಪೂರ್ವ ಕಾಂಗ್ರೆಸ್ ಜನಸಾಮಾನ್ಯರಿಗೆ ಹೇಳಿದ್ದ ಭರವಸೆಗಳಾದ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತೇವೆ. ಆದರೆ, ಈ ವಿಷಯದಲ್ಲಿ ಬಿಜೆಪಿ ಜನರಿಗೆ ದಿಕ್ಕು ತಪ್ಪಿಸಿ ನೀರಿಲ್ಲದ ಭಾವಿಯಲ್ಲಿ ಈಜು ಹೊಡೆಯುವ ಪ್ರಯತ್ನ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ 2018 ರಲ್ಲಿ ಜನರಿಗೆ 60 ಭರವಸೆಗಳನ್ನು ನೀಡಿತ್ತು ಅದರಲ್ಲಿ ಎಷ್ಟನ್ನು ಈಡೇರಿಸಿವೆ. ಚುನಾವಣಾ ಸಂದರ್ಭದಲ್ಲಿ ವರುಣ ಸೇರಿ ಮಂಡ್ಯ, ಕೊಡಗು ಹಾಗೂ ಮೈಸೂರಿನಲ್ಲಿ ಪ್ರತಾಪ್ ಸಿಂಹ ಪ್ರಚಾರ ಮಾಡಿಲ್ಲ. ಸಂಸದ ಮಡಿಕೇರಿಗೆ ಭೇಟಿ ನೀಡಿದರೆ ಜನರು ಅವರಿಗೆ ಕಲ್ಲು ಹೊಡೆಯುತ್ತಾರೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿಯಿದ್ದರೆ ಕಾಂಗ್ರೆಸ್ ಜತೆ ಸೇರಿ ಕೆಲಸ ಮಾಡಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಲಿ. ಸೋನಿಯಾಗಾಂಧಿ, ಸಿದ್ದರಾಮಯ್ಯ, ರಾಹುಲ್, ಖರ್ಗೆ ಸೇರಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಎಲ್ಲ ಭರವಸೆಗಳನ್ನು ಈಡೇರಿಸುತ್ತಾರೆ. ಈ ಹಿಂದೆ ನೀಡಿದ್ದ ಪೆÇಳ್ಳು ಯೋಜನೆಗಳಾದ ಸ್ಮಾರ್ಟ್ ಸಿಟಿ ನಿರ್ಮಾಣ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಸೇರಿದಂತೆ ಇತರ ಯೋಜನೆಗಳನ್ನು ಏಕೆ ಈಡೇರಿಸಿಲ್ಲ ಎಂದು ಪ್ರಶ್ನಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ವಿಜಯ ಸಾಧಿಸದ ಸಂದರ್ಭದಲ್ಲಿ ಕೊಡಗು-ಮೈಸೂರು ಲೋಕಸಭಾ ಸಂಸದ ಪ್ರತಾಪ್ ಸಿಂಹ 150ಕಿಮಿ ದೂರದ ಫೆರಿಫಲ್ ರಿಂಗ್ ರಸ್ತೆ ನಿರ್ಮಾಣ, ಬೆಳವಾಡಿಯಲ್ಲಿ ಪಾರ್ಕ್ ಮಾಡುತ್ತೇವೆ. ಹುಣಸೂರಿನಲ್ಲಿ 2 ಗ್ರಾಮಗಳನ್ನು ದತ್ತು ತೆಗೆದುಕೊಂಡ ಆ ಗ್ರಾಮಗಳ ಸ್ಥಿತಿ ಇಂದಿಗೆ ಏನಾಗಿದೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನೀವು ನೀಡಿದ ಎಲ್ಲ ಭರವಸೆಗಳ ಬಗ್ಗೆ ಮಾಹಿತಿ ಪಡೆಯಲು ಜೂ.1 ರಂದು ನಿಮ್ಮ ಕಚೇರಿಗೆ ಬರಲಿದ್ದೇನೆ. ಇದೆಲ್ಲದರ ಬಗ್ಗೆ ನೀವು ಮಾಹಿತಿ ನೀಡಬೇಕು ಎಂದು ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿದರು.
ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಹಾಗೂ ಪ್ರತಾಪ್ ಸಿಂಹ 350 ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಬಿಟ್ಟು ಗಲಭೆ ಎಬ್ಬಿಸಿದ್ದರು. ಸಿದ್ದರಾಮನ ಹುಂಡಿಯಲ್ಲಿ ಕೋಮು ಗಲಭೆ ಸೃಷ್ಟಿಸಿ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರೂ ಸಹ ಪ್ರಜ್ಞಾವಂತ ಮತದಾರರು ಕೈ ಹಿಡಿದ್ದಾರೆ ಎಂದು ತಿಳಿಸಿದರು.
ಸಿಂಹನ ಅಂತಿಮ ಯಾತ್ರೆ
2024 ರ ಚುನಾವಣೆ ಪ್ರತಾಪ್ ಸಿಂಹ ಅವರ ಅಂತಿಮ ಯಾತ್ರೆಯಾಗಲಿದೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ಪಕ್ಷದವರೇ ನಿಮ್ಮನ್ನು ಸೋಲಿಸಲು ತಂತ್ರ ಎಣೆಯುತ್ತಿದ್ದಾರೆ.ಇದರ ಬಗ್ಗೆ ಗಮನ ಹರಿಸದ ಪ್ರತಾಪ್ ಸಿಂಹ ಗ್ಯಾರಂಟಿ ಸ್ಕೀಂಗಳನ್ನು ಕೇಳುತ್ತಿದ್ದಾರೆ ಈ ಯೋಜನೆಗಳನ್ನು ಕೇಳಲು ನೀವ್ಯಾರು ಎಂದು ಪ್ರಶ್ನಿಸಿದರು.
ಜೆಡಿಎಸ್ ವಿಸರ್ಜಿಸದ ಎಚ್‍ಡಿಕೆ
ಜೆಡಿಎಸ್ ಸ್ಪಷ್ಟ ಬಹುಮತ ಪಡೆಯದಿದ್ದರೆ ಪಕ್ಷ ವಿಸರ್ಜಿಸುವುದಾಗಿ ತಿಳಿಸಿದ್ದರು ಆದರೆ ಇದುವರೆಗೂ ಆ ಕೆಲಸ ಮಾಡಿಲ್ಲ. ಜೆಡಿಎಸ್‍ನ ಭದ್ರಕೋಟೆ ಎನ್ನುತ್ತಿದ್ದ ಮಂಡ್ಯದಲ್ಲಿ ಕೇವಲ 1 ಸ್ಥಾನವನ್ನು ಮಾತ್ರ ಪಡೆದಿದ್ದೀರಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇವಲ 1, 2 ಸೀಟು ಗೆಲ್ಲಬಹುದು ಅಷ್ಟೇ, ಜೆಡಿಎಸ್‍ನ 10ರಿಂದ 12 ಶಾಸಕರು ಬೇರೆ ಪಕ್ಷವನ್ನು ಸೇರಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಿದೆ. ನಮಗೆ ಅವರ ಅವಶ್ಯಕತೆಯಿಲ್ಲ ಅವರು ಒಂದು ವೇಳೆ ಕಾಂಗ್ರೆಸ್ ಸೇರುವುದಾದರೆ ಈ ಬಗ್ಗೆ ಹೈ ಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಕುಮಾರ ಸ್ವಾಮಿ ಅವರು ತಮ್ಮ ಪಕ್ಷದ ಶಾಸಕರ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಇನ್ನು ಮಂದೆ ರಾಜ್ಯದಲ್ಲಿ ಜೆಡಿಎಸ್ ಮುಗಿದ ಅಧ್ಯಾಯ ಎಂದು ಭವಿಷ್ಯ ನುಡಿದರು.
ಬಿಜೆಪಿಯಿಂದ ದ್ವೇಷ ರಾಜಕಾರಣ
ಬಿಜೆಪಿ ಕಳೆದ 4 ವರ್ಷದಲ್ಲಿ ಸಿದ್ದರಾಮಯ್ಯ ವಿರುದ್ದ 42 ಎಫ್‍ಐಆರ್ ದಾಖಲಿಸಲಾಗಿದೆ. ಅದರಲ್ಲಿ 13 ಕ್ರಿಮಿನಲ್ ಕೇಸ್ ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ನಮಗೆ ಬೇಲ್ ಸಿಕ್ಕಿಲ್ಲ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದರು.