ಬಿಜೆಪಿ ಪ್ರಣಾಳಿಕೆ ಮೋದಿ ಆಲ್ಬಂ: ಪ್ರಿಯಾಂಕ್ ವ್ಯಂಗ್ಯ

ಕಲಬುರಗಿ,ಏ.೧೫-ಬಿಜೆಪಿ ಪ್ರಣಾಳಿಕೆ ಘೋಷಣೆಗಳ ಪುಸ್ತಕದಂತಿದ್ದು ಮೋದಿ ಫೋಟೋ ಅಲ್ಬಮ್ ತರ ಇದೆ. ಅವರ ಪಿಕ್‌ನಿಕ್‌ನ ವಿಭಿನ್ನ ಫೋಟೋಗಳು ಬಿಟ್ಟರೆ ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಶ್ರಮಿಕರಿಗೆ, ನಿರ್ಗತಿಕರಿಗೆ ಉಪಯೋಗವಾಗುವ ಯಾವುದೇ ಅಂಶಗಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ಪ್ರಣಾಳಿಕೆ ಈ ಹಿಂದಿನ ಅಚ್ಚೇದಿನ್‌ನಿಂದ ಹಿಡಿದು ಈಗಿನ ಮೋದಿ ಕೀ ಗ್ಯಾರಂಟಿ ವರೆಗೆ ಬಂದಿದೆ. ಈ ಹಿಂದಿನ ಹತ್ತು ವರ್ಷಗಳ ಗ್ಯಾರಂಟಿಗಳು ಯಾರ ಗ್ಯಾರಂಟಿಗಳಾಗಿದ್ದವು ? ಅವರದೇ ಗ್ಯಾರಂಟಿಗಳಾದ ಅಚ್ಛೇ ದಿನ್, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ೧೦೦ ಸ್ಮಾರ್ಟ್ ಸಿಟಿಗಳು, ೨ ಕೋಟಿ ಉದ್ಯೋಗ ಸೃಷ್ಟಿಯ ಗ್ಯಾರಂಟಿಗಳು ಏನಾದವು ? ಯಾವ ಗ್ಯಾರಂಟಿಗಳು ಅನುಷ್ಠಾನಗೊಂಡಿವೆ ? ಅವರ ಗ್ಯಾರಂಟಿಗಳಿಗೆ ವಾರೆಂಟಿಯೇ ಇಲ್ಲ. ಹಾಗಾಗಿ, ಜನರು ಅವರ ಗ್ಯಾರಂಟಿಗಳನ್ನು ನಂಬುವುದಿಲ್ಲ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನೇ ಅವರು ಕಾಪಿ ಮಾಡಿಕೊಂಡಿದ್ದಾರೆ. ಯಾಕೆಂದರೆ ನಮ್ಮ ಗ್ಯಾರಂಟಿಗಳಿಗೆ ಖರ್ಗೆ , ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ಅವರ ಸಾಕ್ಷಿ ಇದೆ ಎಂದರು.
ಯುವಕರ ಬಗ್ಗೆ ಮೋದಿಯ ಗ್ಯಾರಂಟಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಾಯಿದೆ ತರಲಾಗುವುದು ಎಂದಿದೆ. ಅವರದೇ ಪಕ್ಷ ಇಲ್ಲಿ ಅಧಿಕಾರದಲ್ಲಿದ್ದಾಗ ಪರೀಕ್ಷೆಗಳಲ್ಲಿ ಅವಾಂತರ ನಡೆದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಪರೀಕ್ಷೆಗಳ ಅಕ್ರಮ ತಡೆಗೆ ಬಿಲ್ ಪಾಸ್ ಮಾಡಿ ಅದನ್ನು ರಾಜ್ಯಪಾಲರ ಸಹಿಗೆ ಕಳಿಸಲಾಗಿತ್ತು. ಆದರೆ, ಬಿಲ್ ವಾಪಸ್ ಬಂದಿದೆ ಎಂದರು.
ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಕೇಂದ್ರ ಸರ್ಕಾರದಲ್ಲಿ ೩೦ ಲಕ್ಷ ಕೇಂದ್ರದ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ೯.೬೪ ಲಕ್ಷ ಹುದ್ದೆಗಳು ಹಣಕಾಸು ಇಲಾಖೆಯಲ್ಲಿ, ೩ ಲಕ್ಷ ಹುದ್ದೆಗಳು ರೇಲ್ವೆ ಇಲಾಖೆಯಲ್ಲಿ, ೨.೨ ಲಕ್ಷ ಹುದ್ದೆಗಳು ಸೇನೆಯ ಸಿವಿಲ್ ವಿಭಾಗದಲ್ಲಿ, ೧.೨೦ ಲಕ್ಷ ಹುದ್ದೆಗಳು ಅಂಚೆ ಇಲಾಖೆಯಲಿ, ೭೪,೦೦೦ ಹುದ್ದೆಗಳು ಕಂದಾಯ ಇಲಾಖೆಯಲ್ಲಿ ಖಾಲಿ ಇವೆ. ಈ ಎಲ್ಲ ಹುದ್ದೆ ತುಂಬಲು ಯಾವ ಕ್ರಮ ಕೈಗೊಳ್ಳಲಾಗುವುದು ಎನ್ನುವುದರ ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಮಾಹಿತಿ ಇಲ್ಲ. ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಒಎಲ್) ವರದಿ ಪ್ರಕಾರ ೮೩% ಯುವಕರು ನಿರುದ್ಯೋಗಿಗಳಾಗಿದ್ದಾರೆ. ಲೋಕನೀತಿ ಸರ್ವೆ ಪ್ರಕಾರ, ೭೯% ಯುವಕರಿಗೆ ಉದ್ಯೋಗ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು.
ಬಿಜೆಪಿಯವರು ಸ್ಕಿಲ್ ಇಂಡಿಯಾ ಯೋಜನೆಯಡಿಯಲ್ಲಿ ೨೦೨೨ ರ ಒಳಗಾಗಿ ೪೦ ಕೋಟಿ ಯುವಕರಿಗೆ ತರಬೇತಿ ನೀಡುವುದಾಗಿ ಹೇಳಿದ್ದು ಈ ಗುರಿಯಲ್ಲಿ ಇದೂವರೆಗೆ ಕೇವಲ ೩.೫೧% (೧.೪೦ ಕೋಟಿ ) ಜನರಿಗೆ ತರಬೇತಿ ನೀಡಿದ್ದಾರೆ ಹೊರತು ಉದ್ಯೋಗ ನೀಡಿಲ್ಲ. ಈ ೩.೫೧% ರಲ್ಲಿ ೮೦% ಯುವಕರಿಗೆ ಉದ್ಯೋಗ ಸಿಕ್ಕಿಲ್ಲ ೨೦% ಯುವಕರು ಈ ಯೋಜನೆ ಉಪಯೋಗ ಇಲ್ಲ ಎಂದು ಬಿಟ್ಟು ಹೋಗಿದ್ದಾರೆ ಎಂದು ಅಂಕಿ ಅಂಶ ನೀಡಿ ವಿವರಿಸಿದರು.
ಕಳೆದ ಸಲ ಬಂದಾಗ ಮೈಸೂರು, ಹಂಪಿ ಅಂಜನಾದ್ರಿ ಅಭಿವೃದ್ದಿ ಮಾಡುವುದಾಗಿ ಮೋದಿ ಹೇಳಿದ್ದರು ಅವೆಲ್ಲ ಏನಾಯ್ತು ? ಈಗ ಮತ್ತೆ ನಿನ್ನೆ ಅದೇ ಮಾತನ್ನೇ ಹೇಳಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ಬರ ಪರಿಹಾರ, ತೆರಿಗೆ ಪರಿಹಾರ ಕುರಿತು ಮಾತೇ ಆಡಿಲ್ಲ. ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಪಕ್ಕ ಕೂಡಿಸಿಕೊಂಡು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಚಾರ ಬಗ್ಗೆ ಮಾತನಾಡುತ್ತಾರೆ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎಂದು ತಾನೆ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದು ? ಯಡಿಯೂರಪ್ಪ ವಿಜಯೇಂದ್ರ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ನೀಡಿರುವ ಅವಹೇಳನಕಾರಿ ಹೇಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಇನ್ನೂ ಚಾತುರ್ವರ್ಣದಲ್ಲಿದ್ದಾರೆ. ಮಹಿಳೆಯರು ಮುಖ್ಯವಾಹಿನಿಗೆ ಬರುವುದು ಅವರಿಗೆ ಇಷ್ಟವಿಲ್ಲ ಎಂದರು.
ಅಬ್ ಕೀ ಬಾರ್ ಚಾರ್ ಸೌ ಪಾರ್ ಅಲ್ಲ ಅಬ್ ಕೀ ಬಾರ್ ಬಿಜೆಪಿ ಸಂಸತ್ ಕೇ ಬಹಾರ್ ಆಗುತ್ತದೆ ಎಂದು ಸಚಿವ, ಕರ್ನಾಟಕದಿಂದ ನೂರು ಕೋಟಿಹಣ ದೇಶದ ಚುನಾವಣೆಗೆ ಬಳಕೆಯಾಗುತ್ತಿದೆ ಎಂದು ಪ್ರಧಾನಿ ಹೇಳಿರುವುದು ಹಾಸ್ಯಾಸ್ಪದ. ” ಕೇಂದ್ರದ ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಅವರಿಂದ ತನಿಖೆ ನಡೆಸಲಿ ” ಎಂದು ಸವಾಲು ಹಾಕಿದರು.