ಬಿಜೆಪಿ ಪ್ರಜಾತಂತ್ರ ಕಗ್ಗೊಲೆ, ಮಸ್ಕಿ ಕಾಂಗ್ರೆಸ್ ಗೆಲವು – ಬಾದರ್ಲಿ

ಸಿಂಧನೂರು.ಏ.೧೮-ಮಸ್ಕಿ ಉಪಚುನಾವಣೆಯಲ್ಲಿ ಮಸ್ಕಿ ಬ್ಲಾಕ್ ಕಾಂಗ್ರೆಸ್, ಜಿಲ್ಲಾ, ರಾಜ್ಯಮಟ್ಟದ ಪಕ್ಷದ ಮುಖಂಡರು ,ಕಾರ್ಯಕರ್ತರ, ಅಭಿಮಾನಿಗಳ ಹಗಲಿರುಳು ಶ್ರಮಿಸಿದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವದಾಗಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ಕ್ಷೇತ್ರದಲ್ಲಿ ಹಣ ಹಂಚಿ ಅಶಾಂತಿ ವಾತಾವರಣ ಉಂಟು ಮಾಡಿದರೂ ಸಹ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಾಳ್ಮೆಯಿಂದ ಕೆಲಸ ಮಾಡಿ ಕ್ಷೇತ್ರದಲ್ಲಿ ಶಾಂತ ರೀತಿಯಲ್ಲಿ ಚುನಾವಣೆ ಮಾಡಿದ್ದೇವೆ ಎಂದರು.
ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಸರ್ಕಾರ, ಬಿಜೆಪಿ, ಆರ್.ಎಸ್.ಎಸ್, ಭಜರಂಗದಳ ಮುಖಂಡರುಗಳು ಮತದಾರರ ವಿಶ್ವಾಸ ಗೆಲ್ಲುವಲ್ಲಿ ವಿಫಲರಾಗಿ ಸೋಲುವ ಬೀತಿಯಿಂದ ಹಣ ಹಂಚಿ ಚುನಾವಣಾ ಭ್ರಷ್ಟಾಚಾರ ನಡೆಸಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಜಾತಂತ್ರ ಕಗ್ಗೊಲೆ ಮಾಡುವ ಮೂಲಕ ಚುನಾವಣೆ ನಡೆಸಿದ್ದಾರೆ.
ಮಸ್ಕಿ ಕ್ಷೇತ್ರದಲ್ಲಿ ಮಸ್ಕಿ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಮತ್ತು ರಾಜ್ಯ ಮಟ್ಟದ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು ಪ್ರಾಮಾಣಿಕವಾಗಿ ಹಗಲಿರುಳು ಕೆಲಸ ಹಾಗೂ ಹಿಂದಿನ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಯೋಜನೆಗಳನ್ನು ಮತದಾರರ ಮನೆಮನೆಗೆ ಮುಟ್ಟಿಸಿ ಅವರ ವಿಶ್ವಾಸಗಳಿಸಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳಗೆ ಮತ ಹಾಕಿಸುವಲ್ಲಿ ಯಶಸ್ವಿಯಾದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಎರಡನೆ ಅಲೆ ಹೆಚ್ಚಳವಾಗುತ್ತಿದ್ದರೂ ಸಹ ಪ್ರಧಾನಿ, ಮುಖ್ಯಮಂತ್ರಿಗಳು ಮುಂಜಾಗ್ರತಾ ತೆಗದುಕೊಳ್ಳದ ಕಾರಣ ಕೊರೊನಾ ಪ್ರಕರಣಗಳು ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗದೆ, ವೆಂಟಿಲೇಟರ್ ಇಲ್ಲದೆ, ಆಕ್ಸಿಜನ್ ಕೊರತೆಯಿಂದ ಜನ ಕೊರೊನಾಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಜನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ನದಿಗಳಿಗೆ ಆಣೆಕಟ್ಟು ಕಟ್ಟಿ ನೀರಾವರಿ ಮಾಡಿ ರೈತರಿಗೆ ನೀರು ಒದಗಿಸುವ ಮೂಲಕ ದೇಶದಲ್ಲಿ ಹಸಿರು ಕ್ರಾಂತಿ ಮಾಡಿ ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡಿ, ಬ್ಯಾಂಕ್‌ಗಳನ್ನು ರಾಷ್ಟ್ರಿಕರಣ ಮಾಡಿ ಎಲ್ಲಾ ವಲಯದ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಗರೀಬಿ ಹಠಾವೊ ಮಾಡಿ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಕೆಲಸ ಮಾಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿ ಮಾಡಿದೆ. ಹಸಿದವರಿಗೆ ಅನ್ನ ಹಾಕಲಾಗಿದೆ. ಏಳು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಪಕ್ಷದ ಪ್ರಧಾನಿ ಮೋದಿ ಆಡಳಿತ ದಿಂದ ದೇಶದಲ್ಲಿ ಆರ್ಥಿಕತೆ ದಿವಾಳಿಯಾಗಿದೆ.
ಈ ಹಿಂದೆ ಮೋದಿ ಹಾಗೂ ಬಿಜೆಪಿ ಪಕ್ಷದ ಬಗ್ಗೆ ಜನರಲ್ಲಿದ್ದ ಭರವಸೆಗಳೆಲ್ಲಾ ಹುಸಿಯಾಗಿವೆ. ಕೊರೊನಾ ತಡೆಗೆ ಪರ್ಯಾಯ ಯೋಜನೆಗಳನ್ನು ಮಾಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದ್ದು ಜಿಲ್ಲಾ ಉಸ್ತುವಾರಿ ಮಂತ್ರಿ ವೈಫಲ್ಯ ಸಹ ಎದ್ದು ಕಾಣುತ್ತದೆ. ಜನರ ಸಾವಿನ ಜೊತೆ ಚೆಲ್ಲಾಟವಾಡದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊರೊನಾ ದಿಂದ ಜನರ ಜೀವ ಕಾಪಾಡಬೇಕಾಗಿದೆ ಎಂದರು.
ನಗರಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾಜಿ ಮಲ್ಲಿಖ್, ಮುಖಂಡರಾದ ಲಿಂಗಪ್ಪ ದಡೆಸ್ಗೂರು, ನಿರುಪಾದೆಪ್ಪ ಗುಡಿಹಾಳ, ಜಾಫರ್ ಜಾಹಗೀರದಾರ, ಮುನಿರ್ ಪಾಷಾ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.