ಬೊಮ್ಮಾಯಿಗೆ ಸುದೀಪ್ ಬೆಂಬಲ

ಬೆಂಗಳೂರು, ಏ. ೫- ಚಿತ್ರನಟ ಸುದೀಪ್ ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಗೆ ಬೆಂಬಲ ಘೋಷಿಸಿದ್ದು ಅವರು ಹೇಳಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.ಈ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ್ ಸುದೀಪ್ ಅವರು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದರಾದರೂ ಬಿಜೆಪಿಗೆ ನಿಮ್ಮ ಬೆಂಬಲವೇ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಇಲ್ಲಿ ಪಕ್ಷ ನಿಲುವು ಇಲ್ಲ ವ್ಯಕ್ತಿಗತವಾಗಿ ಬೊಮ್ಮಾಯಿ ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ಅವರು ಹೇಳಿದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದಷ್ಟೆ ಹೇಳಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ರರಂಗದಲ್ಲಿ ನನಗೆ ಗಾಡ್‌ಫಾದರ್ ಇರಲಿಲ್ಲ. ಬೊಮ್ಮಯಿ ಅವರನ್ನು ಚಿಕ್ಕಂದಿನಿಂದಲೂ ನೋಡಿದ್ದೇನೆ. ನಾನು ಚಿತ್ರರಂಗಕ್ಕೆ ಬಂದ ಸಮಯದಲ್ಲಿ ನನ್ನ ಕಷ್ಟ ಕಾಲದಲ್ಲಿ ಬೊಮ್ಮಾಯಿ ಅವರು ಸಹಾಯ ಮಾಡಿದ್ದಾರೆ. ಹಾಗಾಗಿ ಕೃತಜ್ಞ ಪೂರ್ವಕವಾಗಿ ಬೊಮ್ಮಾಯಿಗೆ ಬೆಂಬಲ ನೀಡುತ್ತೇನೆ. ಅವರ ಹೇಳಿದಂತೆ ಪ್ರಚಾರಕ್ಕೆ ಹೋಗುತ್ತೇನೆ ಎಂದರು.
ಬಿಜೆಪಿ ಸಲುವಾಗಿ ಪ್ರಚಾರ ಮಾಡುತ್ತೀರಿ ಎಂಬ ಪ್ರಶ್ನಿಗೆ ಎಲ್ಲಾ ಕಡೆ ಹೋಗಲು ಆಗಲ್ಲ. ಸಿಎಂ ಬೊಮ್ಮಾಯಿ ಹೇಳಿದ ಕಡೆ ಪ್ರಚಾರ ಮಾಡುತ್ತೇನೆ ಎಂದರು. ಆಗ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ನನಗೆ ಬೆಂಬಲ ಎಂದರೆ ನಾನುಇರುವ ಪಕ್ಷಕ್ಕೂ ಬೆಂಬಲವೆಂಬತೆ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ ಎಂದು ಇದರ ಅರ್ಥ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದೇನೆ. ಅದರಂತೆ ಚುನಾವಣೆಯಲ್ಲಿ ಅವರ ಪರ ಪ್ರಚಾರ ಮಾಡುತ್ತೇನೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಈ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದರು.
ಚಿತ್ರರಂಗಕ್ಕೆ ಕಾಲಿಟ್ಟ ಸಮಯದಲ್ಲಿ ಕಷ್ಟಕಾಲದಲ್ಲಿ ಕೆಲವರು ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ತಾವು ಕಷ್ಟಕ್ಕೆ ನಿಂತವರ ಪರ ಚುನಾವಣೆಯಲ್ಲಿ ಪ್ರಚಾರ ಮಾಡುವುದಾಗಿ ಸುದೀಪ್ ತಿಳಿಸಿದರು.ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ನನಗೆ ಸಿನಿಮಾಗಳಿವೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಅನಿಸಿದರೆ ಅದನ್ನ ಬಹಿರಂಗವಾಗಿ ಹೇಳಿಯೇ ಚುನಾವಣೆಗೆ ನಿಲ್ಲುತ್ತೇನೆ. ಅನಿವಾರ್ಯತೆ ಅದೆಲ್ಲಾ ಇಲ್ಲ ಎಂದರು.
ನಟ ಸುದೀಪ್ ಅವರನ್ನು ಸೆಳೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಪ್ರಯತ್ನ ನಡೆಸಿದ್ದರು. ಕೆಲ ದಿನಗಳ ಹಿಂದೆ ಸುದೀಪ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸೇರುವಂತೆ ಸುದೀಪ್‌ಗೆ ಆಹ್ವಾನ ನೀಡಿದ್ದರು. ಆದರೆ ಸುದೀಪ್ ಯಾವುದೇ ಪಕ್ಷ ಸೇರದೆ ರಾಜಕೀಯದಿಂದ ದೂರ ಉಳಿದಿದ್ದರು. ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಮತ್ತು ಸಚಿವ ಸುಧಾಕರ್ ಅವರು ನಟ ಸುದೀಪ್ ಅವರ ಮನವೊಲಿಸಿ ಅವರು ಬಿಜೆಪಿ ಪರ ಪ್ರಚಾರ ನಡೆಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ನಟ ಸುದೀಪ್ ಅವರು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಮಗೆ ಆಹ್ವಾನ ಬಂದಿದೆ. ಅಭಿಮಾನಿಗಳ ಅಭಿಪ್ರಾಯ ಆಧರಿಸಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದರಾದರೂ ಯಾವುದೇ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿರಲಿಲ್ಲ. ಆದರೆ ಇಂದು ಅವರು ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಪ್ರಕಟಿಸಿದ್ದಾರೆ.ನಟ ಸುದೀಪ್ ಅವರನ್ನು ಬಿಜೆಪಿ ಪರ ಪ್ರಚಾರ ಮಾಡುವಲ್ಲಿ ಮನವೊಲಿಸಿರುವ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಸುದೀಪ್ ಅವರನ್ನು ಪ್ರಚಾರಕ್ಕೆ ಕರೆ ತರುವ ಮೂಲಕ ಬಿಜೆಪಿಯ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲ್ಲ
ಸುದ್ದಿಗೋಷ್ಠಿಗೂ ಮೊದಲು ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದ್ದರು.
ನಟ ಸುದೀಪ್ ತಮ್ಮ ಆಪ್ತರೊಬ್ಬರಿಗೆ ಬೆಂಗಳೂರಿನ ಕ್ಷೇತ್ರವೊಂದರಿಂದ ಬಿಜೆಪಿ ಟಿಕೆಟ್ ಕೇಳಿದ್ದಾರೆ ಎಂಬ ಮಾತುಗಳಿಗೂ ಪ್ರತಿಕ್ರಿಯಿಸಿದ ಅವರು, ನಾನು ಯಾರಿಗೂ ಟಿಕೆಟ್ ಕೇಳಿಲ್ಲ, ಟಿಕೆಟ್ ಕೊಡಿಸುವಷ್ಟು ದೊಡ್ಡವನಲ್ಲ ಎಂದರು.

ಸುದೀಪ್‌ಗೆ ಬೆದರಿಕೆ ಪತ್ರ
ಬಹುಭಾಷಾ ಖ್ಯಾತಿಯ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಎರಡು ಬೆದರಿಕೆ ಪತ್ರಗಳು ಬಂದಿದ್ದು, ರಾಜ್ಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ಬೆದರಿಕೆ ಪತ್ರಗಳಲ್ಲಿ ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಳ್ಳಲು ಮುಂದಾಗಿದ್ದಾರೆ.
ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸಿಸಿಬಿ ವರ್ಗಾವಣೆ ಮಾಡಿ ಶೀಘ್ರವಾಗಿ ಪ್ರಕರಣ ಪತ್ತೆ ಮಾಡಲು ಸೂಚಿಸಿದ್ದಾರೆ.ನಟ ಸುದೀಪ್ ಗೆ ಬಂದಿರುವ ಬೆದರಿಕೆ ಪತ್ರಗಳು ಹಾಗೂ ಈ ಕುರಿತು ನೀಡಿರುವ ದೂರು ಇನ್ನಿತರ ಮಾಹಿತಿಯನ್ನು ಕಲೆಹಾಕಿರುವ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ಪತ್ರಬರೆದ ಕಿಡಿಗೇಡಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಬೆದರಿಕೆ ಹಾಕಿ ಬರೆದಿರುವ ಪತ್ರಗಳು ಸುದೀಪ್ ಮ್ಯಾನೇಜರ್ ಮಂಜುನಾಥ್ ಅವರಿಗೆ ಸಿಕ್ಕಿದ್ದು ಪತ್ರದಲ್ಲಿ ನಟ ಸುದೀಪ್ ಬಗ್ಗೆ ಅವಾಚ್ಯ ಶಬ್ದಗಳ ಬಳಕೆ ಮಾಡಲಾಗಿದೆ. ಅಲ್ಲದೇ ಸುದೀಪ್ ಅವರ ಖಾಸಗಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಬೆದರಿಕೆ ಹಾಕಲಾಗಿದೆ.
ಪತ್ರಗಳು ಬಂದಿರುವ ಮಾಹಿತಿಯನ್ನು ನಟ ಸುದೀಪ್ ಅವರೊಂದಿಗೆ ಹಂಚಿಕೊಳ್ಳಲಾಗಿದೆ.ಪತ್ರಗಳಿಂದ ಸುದೀಪ್ ಅವರಿಗೆ ಮಾನಸಿಕ ಕಿರುಕುಳ ಉಂಟಾಗಿದ್ದು, ನಟನ ಘನತೆಗೆ ಧಕ್ಕೆ ತರಲು ಮಾಡಿರುವ ಸಂಚು ಎಂದು ಮಂಜುನಾಥ್ ಅವರು ಪುಟ್ಟೇನಹಳ್ಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ ೫೦೬, ಸೆಕ್ಷನ್ ೫೦೪ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ. ಈ ಪತ್ರ ಎಲ್ಲಿಂದ ಬಂತು, ಯಾರು ಕಳುಹಿಸಿದ್ದು ಎನ್ನುವ ತನಿಖೆ ನಡೆಯುತ್ತಿರುವಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿಗೆ ವರ್ಗಾಯಿಸಲಾಗಿದೆ.
ಸುದೀಪ್ ತಾಕೀತು
ಬೆದರಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಸುದೀಪ್ ಅನಾಮಧೇಯ ಬೆದರಿಕೆಗೆಲ್ಲ ಎದುರುವುದಿಲ್ಲ. ಇಂತಹ ಬೆದರಿಕೆ ಪತ್ರಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದು ತಾಕೀತು ಮಾಡಿದರು.
ಬೆದರಿಕೆ ಪತ್ರ ಬರೆದವರು ಯಾರು ಎಂಬುದು ಸಹ ಗೊತ್ತಿದೆ. ಆದರೆ ಅವರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಚಿತ್ರರಂಗದಲ್ಲಿ ತಮ್ಮನ್ನು ಕಂಡರೆ ಆಗದವರು ಇದ್ದಾರೆ. ಅವರಿಗೆ ಅವರ ಮಾರ್ಗದಲ್ಲಿ ನಾನು ಉತ್ತರ ಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ದರ್ಶನ್ ಜತೆಗಿನ ಸುದ್ದಿಗೋಷ್ಠಿ ರದ್ದು
ನಟ ಕಿಚ್ಚಾ ಸುದೀಪ್ ಬಿಜೆಪಿಯ ಸ್ಟಾರ್ ಪ್ರಚಾರಕರಾಗಲು ಒಪ್ಪಿರುವಾಗಲೇ ಮತ್ತೊಬ್ಬ ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುವರು. ಈ ಬಗ್ಗೆ ಅವರು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಸಮ್ಮುಖದಲ್ಲೇ ಘೋಷಣೆ ಮಾಡುವರು ಎಂದು ಹೇಳಲಾಗಿತ್ತು. ಆದರೆ ದರ್ಶನ್ ಅವರ ಜತೆಗಿನ ಮುಖ್ಯಮಂತ್ರಿಗಳ ಸುದ್ದಿಗೋಷ್ಠಿಯನ್ನು ದಿಢೀರ್ ಎಂದು ರದ್ದುಗೊಳಿಸಲಾಗಿದೆ.
ಸುದ್ದಿಗೋಷ್ಠಿ ರದ್ದತಿಗೆ ಯಾವುದೇ ಕಾರಣವನ್ನು ಬಿಜೆಪಿ ನೀಡಿಲ್ಲ. ಕಾರಣಾಂತರಗಳಿಂದ ಮುಖ್ಯಮಂತ್ರಿಗಳ ಮಧ್ಯಾಹ್ನದ ಸುದ್ದಿಗೋಷ್ಠಿ ರದ್ದಾಗಿದೆ ಎಂದಷ್ಟೇ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.
ನಟ ಕಿಚ್ಚಾ ಸುದೀಪ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ನಂತರ ಮುಖ್ಯಮಂತ್ರಿಗಳು ಮಧ್ಯಾಹ್ನ ೨.೩೦ ಕ್ಕೆ ದರ್ಶನ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ಏಕಾಏಕಿ ದರ್ಶನ್ ಅವರ ಜತೆಗಿನ ಮುಖ್ಯಮಂತ್ರಿಗಳ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಗಿದೆ.
ಹೀಗಾಗಿ ನಟ ದರ್ಶನ್ ಬಿಜೆಪಿ ಪರ ಪ್ರಚಾರ ಮಾಡುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.